Home ಕರಾವಳಿ ಸುದ್ದಿದನ ಕಳ್ಳತನ ಪ್ರಕರಣ : ಮೂವರು ಆರೋಪಿಗಳ ಜಾಮೀನು ತಿರಸ್ಕೃತ

ದನ ಕಳ್ಳತನ ಪ್ರಕರಣ : ಮೂವರು ಆರೋಪಿಗಳ ಜಾಮೀನು ತಿರಸ್ಕೃತ

Cattle theft case: Bail rejected for three accused

by Kundapur Xpress

ಉಡುಪಿ: ಕಾಪು ತಾಲೂಕಿನ ಶಿರ್ವ ಠಾಣಾ ವ್ಯಾಪ್ತಿಯ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ಮೇಯಲು ಬಿಟ್ಟಿದ್ದ ದನಗಳನ್ನು ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿಹಾಕಿ ಕಳ್ಳತನಕ್ಕೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಕುಟುಂಬದ ನಾಲ್ವರು ಆರೋಪಿಗಳ ಪೈಕಿ ಮೂವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿದೆ.
ಉಡುಪಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ನ್ಯಾಯಾಲಯದಲ್ಲಿ ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು.

ವಾದ-&ಪ್ರತಿವಾದ ಆಲಿಸಿದ ನ್ಯಾಯಾಧೀಶ ಎಂ. ಪುರುಷೋತ್ತಮ್, ಮೂವರು ಆರೋಪಿಗಳಾದ ಮೊಹಮ್ಮದ್ ಶರೀಫ್ (31), ಸಂಶುದ್ದೀನ್ (57) ಹಾಗೂ ಮಹಮ್ಮದ್ ಆಸೀರ್ (24) ಅವರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶಿಸಿದ್ದಾರೆ.

ಪ್ರಕರಣದ ಮೊದಲ ಆರೋಪಿ ಕಳತ್ತೂರು ಗ್ರಾಮದ ಉಮ್ಮರಬ್ಬ (64) ಅವರನ್ನು ಸೆ. 19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಪುರಸ್ಕರಿಸಿ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಸೆ.19ರಂದು ಸಂಜೆ 4 ಗಂಟೆ ಸುಮಾರಿಗೆ ಕಾಪು ತಾಲೂಕು ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ವಸಂತಿ ಸುನೀತಾ ಕ್ವಾಡ್ರಸ್ ಎಂಬವರು ಮೇಯಲು ಬಿಟ್ಟಿದ್ದ ಐದು ದನಗಳ ಪೈಕಿ ಎರಡು ವರ್ಷ ಪ್ರಾಯದ ಕಪ್ಪು ಬಣ್ಣದ ಒಂದು ದನ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಸಮೀಪದಲ್ಲಿ ನಿಂತಿದ್ದ ಟೆಂಪೋದಲ್ಲಿ ತಮ್ಮ ಕಾಣೆಯಾಗಿದ್ದ ದನ ಪತ್ತೆಯಾಗಿದ್ದು, ಅದರೊಂದಿಗೆ ಮತ್ತೊಂದು ದನವೂ ಇರುವುದು ಕಂಡುಬಂದಿತ್ತು.

ಎರಡೂ ದನಗಳನ್ನು ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಲಾಗಿತ್ತು. ಈ ವೇಳೆ ಟೆಂಪೋ ಬಳಿಯಲ್ಲಿ ದೂರುದಾರರಿಗೆ ಪರಿಚಯವಿದ್ದ ಉಮ್ಮರಬ್ಬ ಸೇರಿದಂತೆ ನಾಲ್ವರು ಇದ್ದರು. ನನ್ನನ್ನು ಕಂಡ ಕೂಡಲೇ ಆರೋಪಿಗಳು ಟೆಂಪೋವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ವಸಂತಿ ಸುನೀತಾ ಕ್ವಾಡ್ರಸ್ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು.

Related Articles

Leave a Comment

This site uses Akismet to reduce spam. Learn how your comment data is processed.