ಕುಂದಾಪುರ : ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಸಾರ್ವಜನಿಕ ಸೇವೆಯ 25 ವರ್ಷಗಳ ಸ್ಮರಿಸುವ ಸಲುವಾಗಿ ಹಮ್ಮಿಕೊಂಡಿರುವ “ಸೇವಾ ಸಂಕಲ್ಪ ಅಭಿಯಾನ”ದ ಪ್ರಯುಕ್ತ, ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಚೆಸ್ ಪಂದ್ಯಕೂಟ ಆಯೋಜಿಸಲಾಗಿತ್ತು.
ಪಂದ್ಯಕೂಟದ ಸಮಾರೋಪ ಸಮಾರಂಭಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀ ಬಿ. ವೈ. ವಿಜಯೇಂದ್ರ ಅವರು ಆಗಮಿಸಿ ಮಾತನಾಡಿ, “ಪ್ರಧಾನಿ ಮೋದಿಜಿ ಅವರ 25 ವರ್ಷಗಳ ಸೇವಾ ಪಯಣ ದೇಶಕ್ಕೆ ಸ್ಫೂರ್ತಿ. ಸೇವಾ ಸಂಕಲ್ಪದ ಮೂಲಕ ಯುವಜನರಲ್ಲಿ ಬೌದ್ಧಿಕ ಮತ್ತು ಕ್ರೀಡಾ ಚೈತನ್ಯ ತುಂಬುವ ಕೆಲಸವನ್ನು ಅಲ್ಪಸಂಖ್ಯಾತ ಮೋರ್ಚಾ ಮಾಡಿದೆ. ಚೆಸ್ ನಂತಹ ಕ್ರೀಡೆಗಳು ಯುವಕರಲ್ಲಿ ಶಿಸ್ತು, ತಾಳ್ಮೆ ಬೆಳೆಸುತ್ತದೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು, “ಸೇವಾ ಸಂಕಲ್ಪ ಅಭಿಯಾನದಡಿ ಜಿಲ್ಲೆಯಾದ್ಯಂತ ಸೇವಾ ಚಟುವಟಿಕೆಗಳ ಜೊತೆಗೆ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಯುವಕರನ್ನು ಮುಖ್ಯವಾಹಿನಿಗೆ ತರುವಲ್ಲಿ ಇಂತಹ ಪಂದ್ಯಕೂಟಗಳು ಸಹಕಾರಿ” ಎಂದರು.
ವೇದಿಕೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಡಾಲ್ಫ್, ಪ್ರಧಾನ ಕಾರ್ಯದರ್ಶಿ ಶೇಖ್ ಆಶಿಫ್, ಮಂಡಲ ಅಧ್ಯಕ್ಷ ಸಾಜನ್ ಪಿ. ಜೇಮ್ಸ್, ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ಹೆರ್ಗ ದಿನಕರ ಶೆಟ್ಟಿ, ಶ್ರೀಕಾಂತ ನಾಯಕ, ಪ್ರಮುಖರಾದ ಶಿಲ್ಪಾ ಜಿ. ಸುವರ್ಣ, ಅನಿತಾ ಆರ್. ಬೈಂದೂರು ಉಪಸ್ಥಿತರಿದ್ದರು.
ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಸ್ವಾಗತಿಸಿದರು. ನವೀನ್ ಡಿಸೋಜ ನಿರೂಪಿಸಿದರು, ಗ್ಲೆನ್ ಮೋನಿಸ್ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
