Home » ಬೆಂಗಳೂರು : ಚೀನಾ ಲಿಂಕ್ ಹೊಂದಿದ್ದ ಮಂಗಳೂರಿನ ಇಬ್ಬರು ಸೈಬರ್ ವಂಚಕರು ಅರೆಸ್ಟ್
 

ಬೆಂಗಳೂರು : ಚೀನಾ ಲಿಂಕ್ ಹೊಂದಿದ್ದ ಮಂಗಳೂರಿನ ಇಬ್ಬರು ಸೈಬರ್ ವಂಚಕರು ಅರೆಸ್ಟ್

by Kundapur Xpress
Spread the love

ಬೆಂಗಳೂರು: ಮ್ಯೂಲ್ ಅಕೌಂಟ್‌ಗಳ ವಿರುದ್ಧ ರಾಜ್ಯ ಸೈಬರ್ ಕಮಾಂಡ್ ಯೂನಿಟ್ ನಡೆಸಿದ ಕಾರ್ಯಾಚರಣೆಯಲ್ಲಿ ಚೀನಾ ಲಿಂಕ್ ಹೊಂದಿದ್ದ ಮಂಗಳೂರಿನ ಇಬ್ಬರು ಸೈಬರ್ ವಂಚಕರನ್ನು ಬಂಧಿಸಲಾಗಿದೆ. ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಅನೀಸ್ ಮತ್ತು ಸಲೀತ್ ಅಹ್ಮದ್ ಬಂಧಿತರಾಗಿದ್ದಾರೆ ಎಂದು ತಿಳಿಯಲಾಗಿದೆ.

ಬಂಧಿತರು ಟ್ರೇಡಿಂಗ್ ಬಿಸಿನೆಸ್ ಹೆಸರಿನಲ್ಲಿ ಜನರಿಂದ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿ, ಬಳಿಕ ಆ ಖಾತೆಗಳನ್ನು ಸೈಬರ್ ವಂಚನೆಗೆ ಬಳಸುತ್ತಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ನಿಖರ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 4 ಮೊಬೈಲ್ ಫೋನ್‌ಗಳು, 18 ಡೆಬಿಟ್ ಕಾರ್ಡ್‌ಗಳು, 17 ಬ್ಯಾಂಕ್ ಪಾಸ್‌ಬುಕ್‌ಗಳು, 6 ಚೆಕ್ ಪುಸ್ತಕಗಳು, 1,479.31 USDT ಮೌಲ್ಯದ ಕ್ರಿಪ್ಟೋಕರೆನ್ಸಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಚೀನಾ ಲಿಂಕ್ ಮ್ಯೂಲ್ ಅಕೌಂಟ್ ದಂಧೆ:
ತನಿಖೆಯಲ್ಲಿ ಈ ಮ್ಯೂಲ್ ಅಕೌಂಟ್ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದ್ದುದಾಗಿ ಪತ್ತೆಯಾಗಿದೆ. ಚೀನಾದ ಸೈಬರ್ ವಂಚಕರಿಗೆ ಕಡಿಮೆ ದರದಲ್ಲಿ ಕ್ರಿಪ್ಟೋಕರೆನ್ಸಿ ಬೇಕಾಗಿದ್ದರಿಂದ, ಬಂಧಿತರು ಭಾರತೀಯರಿಂದ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿಯನ್ನು ಖರೀದಿ ಮಾಡುತ್ತಿದ್ದರು. ಬಳಿಕ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಚೀನಾದ ಸೈಬರ್ ವಂಚಕರೊಂದಿಗೆ ಸಂಪರ್ಕದಲ್ಲಿದ್ದು, ಅದೇ ಕ್ರಿಪ್ಟೋಕರೆನ್ಸಿಯನ್ನು ಅವರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು.

ಈ ಕ್ರಿಪ್ಟೋ ವ್ಯವಹಾರಗಳ ಬದಲಾಗಿ ಆರೋಪಿಗಳು ರೂಪಾಯಿ ರೂಪದಲ್ಲಿ ಹಣವನ್ನು ವಾಪಸ್ ಪಡೆಯುತ್ತಿದ್ದರು. ಇದಕ್ಕಾಗಿ ಮಂಗಳೂರು ನಗರದ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿ, ಸುಮಾರು 70ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಚೀನಾದ ವಂಚಕರಿಗೆ ಒದಗಿಸಿದ್ದಾಗಿ ತಿಳಿದುಬಂದಿದೆ.
ನಂತರ ಚೀನಾದ ಸೈಬರ್ ವಂಚಕರು ಆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದು, ಆ ಹಣ ಸೈಬರ್ ವಂಚನೆಯ ಮೂಲಕ ಬಂದದ್ದಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಚೀನಾದವರ ಸೈಬರ್ ವಂಚನೆ ಬಗ್ಗೆ ತಿಳಿದಿದ್ದರೂ ಸಹ ಹಣದ ಆಸೆಗೆ ಆರೋಪಿಗಳು ಅವರಿಗೆ ಸಹಕಾರ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಳಸಲಾಗಿದ್ದ 37 ಬ್ಯಾಂಕ್ ಖಾತೆಗಳ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ 88ಕ್ಕೂ ಹೆಚ್ಚು ಸೈಬರ್ ವಂಚನೆ ದೂರುಗಳು ದಾಖಲಾಗಿರುವುದು ಪತ್ತೆಯಾಗಿದೆ

 

Related Articles

error: Content is protected !!