ಕಾರ್ಕಳ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಹಿರ್ಗಾನ ಗ್ರಾಮದ ಹೆರ್ಮುಂಡೆ ಬಳಿ ಸೆ.29 ರಂದು ಮಧ್ಯಾಹ್ನ ನಡೆದಿದೆ.Geographic Reference
ಮೃತರನ್ನು ಹಿರ್ಗಾನ ಗ್ರಾಮದ ಭರತ್ ಪೂಜಾರಿ (29) ಮತ್ತು ಹರ್ಷನ್ ಆಚಾರ್ಯ (23) ಎಂದು ತಿಳಿದು ಬಂದಿದೆ.
ಘಟನೆಯ ವಿವರ:
ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ 5 ಜನ ಸ್ನೇಹಿತರು ಮಂಗಿಲಾರು ಮಾರ್ಗವಾಗಿ ಸುಮಾರು 2 ಕಿ.ಮೀ ದುರ್ಗಮ ಕಾಲುದಾರಿಯಲ್ಲಿ ನಡೆದುಕೊಂಡು ಸುವರ್ಣ ನದಿ ತೀರಕ್ಕೆ ತೆರಳಿದ್ದರು. ನದಿಯ ಆಳ ಮತ್ತು ಸೆಳೆತದ ಅರಿವಿಲ್ಲದೆ ಭರತ್ ಹಾಗೂ ಹರ್ಷನ್ ನದಿಗೆ ಇಳಿದಾಗ ಕ್ಷಣಾರ್ಧದಲ್ಲೇ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ದಡದಲ್ಲಿದ್ದ ಸ್ನೇಹಿತರು ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ.
ವಾಹನ ಸಂಚಾರಕ್ಕೆ ರಸ್ತೆ ಇಲ್ಲದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಉಪಕರಣಗಳನ್ನು ಹೊತ್ತು ಸುಮಾರು 3 ಕಿ.ಮೀ ಕಾಲ್ನಡಿಗೆಯಲ್ಲೇ ಘಟನಾ ಸ್ಥಳ ತಲುಪಬೇಕಾಯಿತು. ನಂತರ ಸ್ಥಳೀಯ ಈಜುಗಾರರ ಸಹಕಾರದೊಂದಿಗೆ 3 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಎರಡೂ ಮೃತದೇಹಗಳನ್ನು ಮೇಲಕ್ಕೆತ್ತಲಾಯಿತು.
ಕಾರ್ಕಳ ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭರತ್ ಪೂಜಾರಿ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದು, ಸ್ವಂತ ಮನೆ ಕಾಮಗಾರಿ ಸ್ಲಾಬ್ ಹಂತ ತಲುಪಿದ್ದು ಗೃಹಪ್ರವೇಶದ ನಿರೀಕ್ಷೆಯಲ್ಲಿದ್ದರು. ಯುವಕರ ಅಕಾಲಿಕ ಸಾವು ಹಿರ್ಗಾನ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
