ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಗ್ಯಾರಂಟಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ (50) ಅವರು ತೀವ್ರ ಹೃದಯಾಘಾತದಿಂದ ಭಾನುವಾರ ರಾತ್ರಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಮೊಮ್ಮಗರಾಗಿದ್ದ ಸೂರಜ್ ಹೆಗ್ಡೆ, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು ಹಾಗೂ ಪುದುಚೆರಿ ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಪಕ್ಷದ ಸಂಘಟನೆ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.
ಸಿಎಂ ಸಂತಾಪ:
ಸೂರಜ್ ಹೆಗ್ಡೆ ಅವರ ಅಗಲಿಕೆ ಸುದ್ದಿ ಕೇಳಿ ನನ್ನ ಮನಸ್ಸಿಗೆ ಆಘಾತವಾಗಿದೆ. ಚಿಕ್ಕ ವಯಸ್ಸಿಗೆ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ನಂಬಲೇ ಆಗುತ್ತಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸೂರಜ್ ಹೆಗ್ಡೆ ಅವರು ತಮ್ಮ ತಾತ ದೇವರಾಜ ಅರಸು ಅವರಂತೆ ಹಿಂದುಳಿದ ವರ್ಗಗಳು, ಕಾರ್ಮಿಕರ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದರು. ಈಗ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದಿದ್ದಾರೆ.

