Home » ಚಿನ್ನಾಭರಣಗಳನ್ನು ವಿವಾಹ ಕಾರ್ಯಕ್ರಮಕ್ಕೆ ಬೇಕೆಂದು ನಂಬಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಂಚನೆ
 

ಚಿನ್ನಾಭರಣಗಳನ್ನು ವಿವಾಹ ಕಾರ್ಯಕ್ರಮಕ್ಕೆ ಬೇಕೆಂದು ನಂಬಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಂಚನೆ

by Kundapur Xpress
Spread the love

ಕಾಪು : ಮದುವೆ ಸಂದರ್ಭದಲ್ಲಿದ್ದ ಚಿನ್ನಾಭರಣಗಳನ್ನು ವಿವಾಹ ಕಾರ್ಯಕ್ರಮಕ್ಕೆ ಬೇಕೆಂದು ನಂಬಿಸಿ ಪಡೆದು ಲಕ್ಷಾಂತರ ರೂಪಾಯಿ ಮೌಲ್ಯದ ವಂಚನೆ ನಡೆಸಿದ ಪ್ರಕರಣ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕಟಪಾಡಿ, ಉಡುಪಿ ನಿವಾಸಿ ಅವ್ವಮ್ಮ (30) ಅವರು ನೀಡಿದ ದೂರಿನ ಪ್ರಕಾರ, ಮದುವೆ ವೇಳೆ ಮನೆತನದಿಂದ 37 ಪವನ್ ಚಿನ್ನ ನೀಡಲಾಗಿತ್ತು. ನಂತರ ನಾದಿನಿ ನಸೀಮಾ ಅವರು ವಿವಾಹ ಕಾರ್ಯಕ್ರಮಕ್ಕೆ ಹೋಗಲು ಬೇಕೆಂದು ಹೇಳಿ, ಪಿರ್ಯಾದಿದಾರರಲ್ಲಿದ್ದ ಒಟ್ಟು 296 ಗ್ರಾಂ ಚಿನ್ನಾಭರಣಗಳನ್ನು ಪಡೆದುಕೊಂಡಿರುವುದಾಗಿ ಆರೋಪಿಸಲಾಗಿದೆ.

ಸರ, ಪೆಂಡೆಂಟ್, ಬ್ರೇಸ್ಲೆಟ್, ಬಳೆ, ಉಂಗುರ, ದೊಡ್ಡ ಮಾಲೆ, ನೆಕ್ಲೇಸ್, ಸೊಂಟಪಟ್ಟಿ, ಮುತ್ತಿನ ಹಾರ ಸೇರಿದಂತೆ ವಿವಿಧ ಆಭರಣಗಳು ಇದರಲ್ಲಿ ಸೇರಿವೆ.

ನಸೀಮಾ ಅವರೊಂದಿಗೆ ಬಂದಿದ್ದ ಆಯಿಶಾ ಮಿಶ್ರೀಯಾ ಹಾಗೂ ರಮೀಜ್ ಅವರು ರಮೀಜ್ ಅವರ ಆಟೋ ರಿಕ್ಷಾದಲ್ಲಿ ಚಿನ್ನವನ್ನು ಕೊಂಡೊಯ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದಲ್ಲದೆ ₹32,900 ಮೌಲ್ಯದ ಎಲ್‌ಜಿ ಫ್ರಿಜ್‌, ₹49,000 ಮೌಲ್ಯದ ಐಫೋನ್ 13 ಹಾಗೂ ವಾಷಿಂಗ್ ಮಷೀನ್ ಖರೀದಿಸುವುದಾಗಿ ಪಡೆದುಕೊಂಡು ಹಣ ಪಾವತಿಸದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಸಾಲ ತೆಗೆಯಿಸಿ ಕೊಡುತ್ತೇವೆ ಎಂದು ನಂಬಿಸಿ ಬ್ಯಾಂಕ್ ಆಫ್ ಬರೋಡಾ ಕಟಪಾಡಿ ಮೂಡಬೆಟ್ಟು ಶಾಖೆಯ ಖಾಲಿ ಸಹಿ ಮಾಡಿದ ಚೆಕ್‌ನ್ನೂ ಪಡೆದುಕೊಂಡಿರುವುದಾಗಿ ಆರೋಪಿಸಲಾಗಿದೆ.

ಪರಿಶೀಲನೆ ವೇಳೆ ಚಿನ್ನವನ್ನು ಕಟಪಾಡಿಯ ದೈವಜ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಅಡವಿಟ್ಟಿರುವುದು ತಿಳಿದುಬಂದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಪಿರ್ಯಾದಿದಾರರು ಚಿನ್ನಾಭರಣ, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಮರಳಿ ನೀಡುವಂತೆ ಕೇಳಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಒಟ್ಟು ₹42,71,780 ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Related Articles

error: Content is protected !!