Home ಕರಾವಳಿ ಸುದ್ದಿಉಡುಪಿ : ಮನೆ ಕಳ್ಳತನ ಪ್ರಕರಣ : ಬೆಡಿಯಾ ಗ್ಯಾಂಗ್‌ಗೆ ಸೇರಿದ ಇಬ್ಬರು ಆರೋಪಿಗಳ ಅರೆಸ್ಟ್

ಉಡುಪಿ : ಮನೆ ಕಳ್ಳತನ ಪ್ರಕರಣ : ಬೆಡಿಯಾ ಗ್ಯಾಂಗ್‌ಗೆ ಸೇರಿದ ಇಬ್ಬರು ಆರೋಪಿಗಳ ಅರೆಸ್ಟ್

Udupi: House Theft Case: Two Accused Belonging to Bedia Gang Arrested

by Kundapur Xpress

ಉಡುಪಿ: ನಗರದ ಅಂಬಲಪಾಡಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆ ಪೊಲೀಸರು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್‌ಗೆ ಸೇರಿದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹4.50 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆ ಬಳಿಯ ನಿವಾಸಿ ಎ.ಎಸ್. ರಾಮಮೂರ್ತಿ (70) ಅವರು ಜುಲೈ 1ರಂದು ಮನೆಗೆ ಬೀಗ ಹಾಕಿ ಮಂಗಳೂರಿನಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಜುಲೈ 9ರಂದು ವಾಪಸ್ ಬಂದಾಗ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿರುವುದು ಪತ್ತೆಯಾಗಿತ್ತು. ಕಪಾಟಿನಲ್ಲಿದ್ದ ₹6 ಲಕ್ಷ ನಗದು ಹಾಗೂ ಮೂರು ವಾಚ್‌ಗಳು ಕಳವಾಗಿದ್ದವು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೆ.2ರಂದು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಶಿ ತಾಲೂಕಿನ ಅಕ್ರೌಲಿ ಗ್ರಾಮದ ಮೊಹಮ್ಮದ್ ಜಾಫರ್ (22) ಎಂಬಾತನನ್ನು ಉಡುಪಿ ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಂಧಿಸಿದ್ದರು. ವಿಚಾರಣೆ ವೇಳೆ ಜಾಫರ್ ಹಾಗೂ ಆತನ ಸಹಚರ ಕದೀರ್ ಸೇರಿ ಕಳ್ಳತನ ನಡೆಸಿರುವುದಾಗಿ ತಿಳಿದುಬಂದಿದೆ. ಜಾಫರ್‌ನಿಂದ ನಗದು ಹಾಗೂ ಮೊಬೈಲ್ ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.ಮುಂದುವರಿದ ತನಿಖೆಯಲ್ಲಿ ಸೆ.25ರಂದು ಎರಡನೇ ಆರೋಪಿ ಕದೀರ್ (32)ನನ್ನು ಮೂಡಬಿದ್ರೆಯಲ್ಲಿ ಬಂಧಿಸಲಾಗಿದೆ. ಆತನಿಂದ ₹1.65 ಲಕ್ಷ ನಗದು, ಎರಡು ಬೆಳ್ಳಿ ನಾಣ್ಯಗಳು, ಐದು ವಾಚ್‌ಗಳು, ಎರಡು ಸ್ಕೂಡ್ರೈವರ್‌ಗಳು ಹಾಗೂ ಕಂದು ಬಣ್ಣದ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಒಟ್ಟು ₹4,50,500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್‌ನ ಸದಸ್ಯರಾಗಿದ್ದು, ಇವರ ವಿರುದ್ಧ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ ಮತ್ತು ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. PSI ರತ್ನಾಕರ್ ಕೆ., ಎಎಸ್‌ಐ ಹರೀಶ್ ಸೇರಿದಂತೆ ನಗರ ಠಾಣೆ ಹಾಗೂ ಮಣಿಪಾಲ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Articles

Leave a Comment

This site uses Akismet to reduce spam. Learn how your comment data is processed.