ಬಂಟ್ವಾಳ : ನಾಗಮಂಗಲದಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭ ನಡೆದ ಅಹಿತಕರ ಘಟನೆ ಜೀವಂತವಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೂಕ್ಷ್ಮ ಪ್ರದೇಶವೆಂದೇ ಗುರುತಿಸಲಾದ ‘ಬಿ.ಸಿ.ರೋಡಿನಲ್ಲಿಯು ಸವಾಲು- ಪ್ರತಿಸವಾಲಿನ ಹಿನ್ನಲೆಯಲ್ಲಿ ಸೋಮವಾರ ಕೆಲವು ಹೊತ್ತುಗಳ ಕಾಲ ಉದ್ವಿಗ್ನ ಸ್ಥಿತಿ ಉಂಟಾಯಿತು.
ಖಂಡನಾ ಸಭೆಯೊಂದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯವಾಹ ಶರಣ್ ಪಂಪ್ ವೆಲ್ ಆಡಿದ್ದರೆನ್ನಲಾದ ಹೇಳಿಕೆಯೊಂದಕ್ಕೆ ಉತ್ತರವಾಗಿ ಬಂಟ್ವಾಳ ಪುರಸಭೆಯ ಮಾಜಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಶರೀಫ್ ಹಾಗೂ ಸದಸ್ಯ ಹಸೈನಾರ್, ತಾಕತ್ತಿದ್ದರೆ ಈದ್ ಮೆರವಣಿಗೆ ವೇಳೆ ಬಂಟ್ವಾಳಕ್ಕೆ ಬನ್ನಿ ಎಂಬ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದು ಉದ್ವಿಗ್ನತೆಗೆ ಕಾರಣವಾಯಿತು.
ಶರಣ್ ಪಂಪ್‌ವೆಲ್ ಅವರನ್ನು ಎತ್ತಿಕೊಂಡೆ ಕಾರ್ಯಕರ್ತರು ಪೊಲೀಸರ ತಡೆಯನ್ನು ಲೆಕ್ಕಿಸದೆ ಹೆದ್ದಾರಿಯತ್ತ ಸಾಗಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟದ ಹೈಡ್ರಾಮ ನಡೆಯಿತು. ಪರಿಸ್ಥಿತಿ ಕೈ ಮೀರಿ ಹೋಗುವ ಹಂತಕ್ಕೆ ತಲುಪಿದಾಗ ಪೊಲೀಸರು ಬಸ್‌ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು. ಇದರಿಂದಾಗಿ ಬಿಗುವಿನ ವಾತಾವರಣ ಉಂಟಾಯಿತು. ಒಂದು ಹಂತದಲ್ಲಿ ಪರಿಸ್ಥಿತಿ ಬಿಗುವಾಗುತ್ತಿದಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ -144 ಹಾಕಲು ತಾಲೂಕಾಡಳಿತ ಮುಂದಾಗಿತ್ತು. ಈ ಸಂಬಂಧ ಬಂಟ್ವಾಳ ಪೊಲೀಸ್ ಇನ್ಸ್ ಪೆಕ್ಟರ್ ಅನಂತಪ್ರಸಾದ್ ಅವರು ತಹಶೀಲ್ದಾರರಿಗೆ ಪತ್ರವನ್ನು ನೀಡಿದ್ದರು. ಪರಿಸ್ಥಿತಿ ಹತೋಟಿಗೆ ಬರುತ್ತಿದ್ದಂತೆ ಇದನ್ನು ಕೈಬಿಡಲಾಯಿತು