ಬೆಂಗಳೂರು :ಕಾಂಗ್ರೆಸ್ ಪಕ್ಷದ ತುಷ್ಟಿಕರಣದ ರಾಜನೀತಿ ಮತ್ತು ಅಲ್ಪಸಂಖ್ಯಾತರ ಓಲೈಕೆಯ ನೀತಿಯಿಂದ ರಾಜ್ಯದ ಸುರಕ್ಷತೆಗೆ ಗಂಡಾಂತರ ಬಂದಿದೆ ಎಂಬುದು ಮೇಲ್ನೋಟಕ್ಕೆಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ಘಟನೆ ಕುರಿತು ಶುಕ್ರವಾರ ಪಕ್ಷದ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ಒಪ್ಪಿಸಬೇಕು. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವಿಧಾನಸೌಧದ ಘಟನೆ ಸಂಬಂಧ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದು ಸತ್ಯ ಎಂದು ಎಫ್‌ಎಸ್‌ಎಲ್ ವರದಿ ಹೇಳಿದೆ. ಅದನ್ನು ಮುಚ್ಚಿಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಎಫ್‌ಎಸ್ ಎಲ್ ವರದಿ ತಿದ್ದುಪಡಿ ಮಾಡಿ ಮತ್ತೊಂದು ಬೋಗಸ್ ಎಫ್‌ಎಸ್ಎಲ್ ವರದಿ ಸಿದ್ಧಪಡಿಸಲಾಗುತ್ತಿದೆ ಎಂಬ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ ಎಂದು ತಿಳಿಸಿದರು.