ಕುಂದಾಪುರ : ಇಲ್ಲಿನ ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಯಕ್ಷಗಾನ ಸಂಘದ ಜಂಟಿ ಆಶ್ರಯದಲ್ಲಿ “ಗಿಳಿವಿಂಡು” ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ ಈ ವಿಷಯದ ಕುರಿತು ವಿಶೇಷ ಉಪನ್ಯಾಸ ಸೆಪ್ಟೆಂಬರ್ 21ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕನರಾಡಿ ವಾದಿರಾಜ ಭಟ್ ಅವರು ಮಾತನಾಡಿ, ಕುಂದಾಪ್ರ ಕನ್ನಡ ನೆಲದ ಸೊಗಡು ಹೊಂದಿದ ವಿಶಿಷ್ಟ ಭಾಷೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಈ ಭಾಷೆಯ ಪದಗಳು ಹೇರಳವಾಗಿ ದೊರಕುತ್ತದೆ. ವ್ಯಾಕರಣ ದೃಷ್ಟಿಯಿಂದಲೂ ಈ ಭಾಷೆ ವಿಶಿಷ್ಟವಾಗಿದೆ. ಅನ್ಯ ಭಾಷೆಗಳ ಪ್ರಭಾವವು ಕುಂದಾಪ್ರ ಕನ್ನಡದ ಮೇಲೆ ತೀರ ಕಡಿಮೆ ಎಂದರು.
ಅಧ್ಯಕ್ಷತೆ ವಹಿಸಿದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಗಿಳಿವಿಂಡು ಇದರ ಅಧ್ಯಕ್ಷರಾದ ಪ್ರೊ. ಬಿ. ಶಿವರಾಮ ಶೆಟ್ಟಿ ಅವರು ಮಾತನಾಡಿ, ಒಂದು ಕಾಲಘಟ್ಟದ ಸಮುದಾಯ ಅಲ್ಲಿನ ಸಾಂಸ್ಕೃತಿಕ ಅಂಶಗಳನ್ನು ಹೆಗ್ಗುರುತ್ತಾಗಿಸಿಕೊಂಡು ಪ್ರಾದೇಶಿಕತೆಯಲ್ಲಿ ಅಥವಾ ಸಾಮಾಜಿಕ, ಧಾರ್ಮಿಕ ನೆಲೆಯಲ್ಲಿ ಗುರುತಿಸಲ್ಪಡುವಂತೆ ತನ್ನ ಅನನ್ಯತೆಯನ್ನು ಸಾರುತ್ತದೆ. ಭಾಷೆಯ ಮೂಲಕ ಜನರ ಸಂಪ್ರದಾಯ, ಆಚರಣೆ, ಸಾಹಿತ್ಯ ಮತ್ತು ಕಲೆಗಳು ಸಾಂಸ್ಕೃತಿಕ ಅನನ್ಯತೆಯಾಗಿ ಉಳಿಯುತ್ತದೆ ಎಂದರು.
ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪ್ರಸ್ತಾವಿಸಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಯಕ್ಷಗಾನ ಸಂಘದ ಸಂಯೋಜಕ ರವಿನಂದನ್ ಭಟ್ ವಂದಿಸಿದರು. ವಿದ್ಯಾರ್ಥಿ ಅನುಶ್ರೀ ಅತಿಥಿಗಳನ್ನು ಪರಿಚಯಿಸಿ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಪ್ರವೀಣಾ ಎಮ್. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
