ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರದ ಲಲಿತ ಕಲಾ ಸಂಘದ ವತಿಯಿಂದ ಸೆಪ್ಟೆಂಬರ್ 19, ಶನಿವಾರದಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ ಆಯೋಜಿಸಲಾಯಿತು. ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಈ ಭೇಟಿಯಲ್ಲಿ ಭಾಗವಹಿಸಿದರು.
ಈ ಸಂದರ್ಭ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಅಲ್ಲಿನ ಪಾರಂಪರಿಕ ಕಲೆ, ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಛಾಯಾಚಿತ್ರಗಳು, ಶಿಲೆಗಳು ಹಾಗೂ ಅಲ್ಲಿನ ವಿವಿಧ ಐತಿಹಾಸಿಕ ಮತ್ತು ಕಲಾತ್ಮಕ ಅಂಶಗಳ ಮೂಲಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪರಿಚಯಿಸಿದರು.
ವಿದ್ಯಾರ್ಥಿಗಳು ಅಲ್ಲಿನ ವಿವಿಧ ಕಲಾಕೃತಿಗಳು, ಐತಿಹಾಸಿಕ ಕುರುಹುಗಳು ಹಾಗೂ ಪಾರಂಪರಿಕ ವಸ್ತುಗಳನ್ನು ವೀಕ್ಷಿಸುವ ಮೂಲಕ ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಂಡರು.
ಈ ಸಂದರ್ಭದಲ್ಲಿ ಲಲಿತ ಕಲಾ ಸಂಘದ ಸಂಯೋಜಕರು ಮತ್ತು ಆಡಳಿತ ನಿಕಾಯಕರಾದ ರಕ್ಷಿತ್ ರಾವ್ ಗುಜ್ಜಾಡಿ, ಐಕ್ಯೂಎಸಿ ಸಂಯೋಜಕರಾದ ದೀಪಿಕಾ ಜಿ. ಹಾಗೂ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಿರ್ಮಲಾ ಬಿ. ಉಪಸ್ಥಿತರಿದ್ದರು.
