ತಲ್ಲೂರು : ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿ ಅತ್ಯಂತ ಅದ್ದೂರಿ ಹಾಗೂ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ವಿವಿಧ ಶಾಲೆಗಳ ಬಾಲಕ ಹಾಗೂ ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮವನ್ನು ಶ್ರೀ ಉದಯಕುಮಾರ್ ತಲ್ಲೂರು, ಸಾಮಾಜಿಕ ಹೋರಾಟಗಾರರು ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಜಯಕುಮಾರ್ ಶೆಟ್ಟಿ, ಅಧ್ಯಕ್ಷರು, ಉಡುಪಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘ, ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕುಸುಮಾಕರ್, ಶಿಕ್ಷಕರ ಸಂಘದ ಅಧ್ಯಕ್ಷರು, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ECO ಶ್ರೀ ಯೋಗೀಶ್, ಶ್ರೀ ಅರುಣ್ ಕುಮಾರ್ ಶೆಟ್ಟಿ, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು, ಬೈಂದೂರು CRP ಶ್ರೀ ರವಿಚಂದ್ರ, ಹಾಗೂ ಶ್ರೀ ಮಂಜುನಾಥ ಶೆಟ್ಟಿ, ಮುಖ್ಯೋಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಲ್ಲೂರು, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅವಿಲಾ ಹಾಗೂ ಶಾಲೆಯ ಆಡಳಿತಾಧಿಕಾರಿ ಸಿಸ್ಟರ್ ಕುಂಚಿತ ಹಾಗೂ ಶ್ರೀಮತಿ ರತ್ನಾ ರವಿ ಶೆಟ್ಟಿ ಅವರ ಸಹಕಾರದಲ್ಲಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ GHPS ಆವರ್ಸೆ ತಂಡ ಪ್ರಥಮ ಸ್ಥಾನ ಹಾಗೂ GHPS ಮೂವಾಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ HVS & GHS ಕುಚ್ಚೂರು ತಂಡ ಪ್ರಥಮ ಸ್ಥಾನ ಹಾಗೂ KPS ಮಣೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ವಿಜೇತ ತಂಡಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಸ್ವಾತಿ ಅವರು ನಿರೂಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸಂಧ್ಯಾ ರಾಣಿ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶ್ರೀಮತಿ ಸುಮಿತ್ರ ಅವರು ಧನ್ಯವಾದ ಸಮರ್ಪಿಸಿದರು.
ಕ್ರೀಡಾಪಟುಗಳ ಉತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಂಘಟಕರ ಅಚ್ಚುಕಟ್ಟಾದ ವ್ಯವಸ್ಥೆಯಿಂದಾಗಿ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು. ತಲ್ಲೂರಿನ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ ನಡೆದ ಈ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿ ಕ್ರೀಡಾಭಿಮಾನಿಗಳ ಮನದಲ್ಲಿ ಸ್ಮರಣೀಯವಾಗಿ ಉಳಿಯಿತು.
