ಹೆಮ್ಮಾಡಿ: ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರ ಕನಸಿನ ಯೋಜನೆಯಾದ “ಭೀಮೋದ್ಯಮ” ಉದ್ಯಮಶೀಲತಾ ಕಾರ್ಯಕ್ರಮ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಭಾರೀ ಯಶಸ್ಸಿನೊಂದಿಗೆ ನಡೆಯಿತು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಯುವಜನರಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಉದ್ಯಮಶೀಲತೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ ನೂರಾರು ಯುವಕರು, ಯುವತಿಯರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸ್ವಯಂ ಉದ್ಯೋಗ ಮಾಡಲು ಇಚ್ಚೀಸುವ ಅನೇಕರು ಭಾಗವಹಿಸಿ ವಿಶೇಷ ಮೆರುಗು ತಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯದಲ್ಲೇ ಮಾದರಿಯಾಗುವಂತಹ ಕಾರ್ಯಕ್ರಮವನ್ನು ರೂಪಿಸಿರುವ ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಾರ್ಯವನ್ನು ಶ್ಲಾಘಿಸಿದರು.
ಯುವಕರನ್ನು ಉದ್ಯೋಗ ಅರಸುವವರಿಂದ ಉದ್ಯೋಗ ಸೃಷ್ಟಿಸುವವರನ್ನಾಗಿ ರೂಪಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ. ಬೈಂದೂರಿನಲ್ಲಿ ಆರಂಭವಾಗಿರುವ ಈ ಮಾದರಿ ರಾಜ್ಯದಾದ್ಯಂತ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, “ಯುವಕರು ಕೇವಲ ಸರ್ಕಾರಿ ಉದ್ಯೋಗಗಳ ನಿರೀಕ್ಷೆಯಲ್ಲಿ ಕಾಲ ಕಳೆಯದೆ ಸ್ವಂತ ಉದ್ಯಮ ಆರಂಭಿಸುವತ್ತ ಹೆಜ್ಜೆ ಇಡಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಅವುಗಳನ್ನೇ ಸಾಧನೆಯ ಮೆಟ್ಟಿಲನ್ನಾಗಿ ಮಾಡಿಕೊಂಡಾಗ ಯಶಸ್ಸು ಸಾಧ್ಯವಾಗುತ್ತದೆ. ಕ್ಷೇತ್ರದ ಉದ್ಯಮ ಸ್ಥಾಪಿಸಲು ಆಸಕ್ತಿ ಇರುವ ಯುವಕ-ಯುವತಿಯರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶ ದೊರಕಬೇಕೆಂಬ ಉದ್ದೇಶದಿಂದ ಭೀಮೋದ್ಯಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‌ಗಳ ಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ನೇರವಾಗಿ ಸಂವಾದ ನಡೆಸಿ, ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡು ಸ್ವಂತ ಉದ್ಯಮ ಆರಂಭಿಸುವ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಎಸ್‌ಸಿ-ಎಸ್‌ಟಿ ಅಧ್ಯಯನ ಟ್ರಸ್ಟ್‌ನ ಮೋಹನ್ ಅಂಗಯ್ಯ ಸ್ವಾಮಿ, ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಮಂಡಲ ಉಪಾಧ್ಯಕ್ಷೆ ಮಾಲತಿ ನಾಯ್ಕ್ ಸೇರಿದಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ರಾಜ್ಯದಲ್ಲೇ ವಿಶಿಷ್ಟ ಪ್ರಯತ್ನ
ಭೀಮೋದ್ಯಮ ಕಾರ್ಯಕ್ರಮದಲ್ಲಿ ಉದ್ಯಮ ಸ್ಥಾಪನೆ, ಹಣಕಾಸು ನಿರ್ವಹಣೆ, ಬ್ಯಾಂಕ್ ಸಾಲ ಸೌಲಭ್ಯಗಳು, ಮಾರುಕಟ್ಟೆ ಅವಕಾಶಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ತಜ್ಞರಿಂದ ಸಮಗ್ರ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕ್ಕೆ ಭಾಗವಹಿಸಿದ ಯುವಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬೈಂದೂರು ಕ್ಷೇತ್ರದಲ್ಲಿ ಉದ್ಯಮಶೀಲತೆಯ ಹೊಸ ಅಲೆ ಮೂಡಿಸಿದೆ.
ವಿವಿಧ ಇಲಾಖೆ ಮತ್ತು ಬ್ಯಾಂಕ್‌ಗಳ ಸಕ್ರಿಯ ಭಾಗವಹಿಸುವಿಕೆ
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಲೀಡ್ ಬ್ಯಾಂಕ್‌ನ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು, ಸ್ವಯಂ ಉದ್ಯೋಗ ತರಬೇತಿ ನೀಡುವ ರುಡ್ಸೆಟ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಉದ್ಯಮ ಕ್ಷೇತ್ರದ ಪರಿಣಿತರು ಹಾಜರಿದ್ದು, ಉದ್ಯಮ ಆರಂಭಿಸಲು ಬಯಸುವವರಿಗೆ ಅಗತ್ಯ ಮಾರ್ಗದರ್ಶನ ಮತ್ತು ಮಾಹಿತಿ ನೀಡಿದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡ ಆರು ಮಂದಿ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅವರ ಯಶೋಗಾಥೆಗಳು ಯುವಜನತೆಗೆ ಸ್ಫೂರ್ತಿ ತುಂಬಿದವು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಯುವಕರಲ್ಲಿ ಉದ್ಯಮಶೀಲತೆಯ ಆತ್ಮವಿಶ್ವಾಸ ಮೂಡಿಸುವಲ್ಲಿ ಭೀಮೋದ್ಯಮ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದ್ದು, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದ ಕಾರ್ಯಕ್ರಮ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

