ಕುಂದಾಪುರ: ರಾಜ್ಯ ಬಿಜೆಪಿ ಸೂಚನೆಯಂತೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷಗಳ ಸಾರ್ಥಕ ಜನಪರ ಆಡಳಿತವನ್ನು ಪೂರೈಸಿ 10ನೇ ವರ್ಷಕ್ಕೆ ಪಾದಾರ್ಪಣೆಗೈದಿರುವ ಸುಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಪ್ರಧಾನಿ ಮೋದಿ ಆಡಳಿತಾವಧಿಯ ಸಾಧನೆಗಳ ಪ್ರಚಾರ ಸಹಿತ ಸಂಘಟನಾತ್ಮಕ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ಕುಮಾರ್ ತಿಳಿಸಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಂಡಲವಾರು ಉಸ್ತುವಾರಿಗಳ ಯಾದಿ ಬಿಡುಗಡೆಗೊಳಿಸಿ ಮಾತನಾಡಿದರು.
ಮಂಡಲ ಮಟ್ಟದಲ್ಲಿ ಹಿರಿಯ ಬಿಜಿಪಿಗರ ಸಮಾವೇಶ, ವ್ಯಾಪಾರಸ್ಥರ ಸಮಾವೇಶ, ಮಂಡಲ ಕಾರ್ಯಕಾರಿಣಿ ಸಭೆ, ಕೇಂದ್ರ ಸರಕಾರದ ಸಾಧನೆ ಪ್ರಚುರಪಡಿಸುವ ಕರಪತ್ರ ವಿತರಣೆ, ಮನೆ ಮನೆ ಭೇಟಿ ಪ್ರಯುಕ್ತ ವೃತ್ತಿಪರರ ಸಹಿತ ಮಂಡಲವಾರು 100 ಮಂದಿ ಪ್ರಮುಖರ ತಂಡ ರಚನೆ, ಬೂತ್ ವಾರು 100 ಮಂದಿ ಸಕ್ರಿಯ ಕಾರ್ಯಕರ್ತರ ತಂಡ ರಚನೆ, ಮಂಡಲ ಪದಾಧಿಕಾರಿಗಳ ಕೂಟ ಆಯೋಜನೆ, ಸೋಷಿಯಲ್ ಮೀಡಿಯಾ ತಂಡಗಳನ್ನು ಸಕ್ರಿಯಗೊಳಿಸುವುದು ಮುಂತಾದ ಪ್ರಮುಖ ಕಾರ್ಯ ಯೋಜನೆಗಳನ್ನು ಶೀಘ್ರವಾಗಿ ಕಾರ್ಯಗತಗೊಳಿಸಬೇಕಾಗಿದೆ ಎಂದರು.
ಬಿಜೆಪಿಗೆ ರಾಜ್ಯದಲ್ಲಿ ಈ ಬಾರಿ ವ್ಯತಿರಿಕ್ತ ಫಲಿತಾಂಶ ಬಂದಿರಬಹುದು. ಆದರೆ ಕೇಂದ್ರ ಸರಕಾರದ ಆಡಳಿತ ವೈಖರಿ ಹಾಗೂ ಜನಪರ ಯೋಜನೆಗಳ ಬಗ್ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆ ಬೇಟಿಯ ಸಂದರ್ಭದಲ್ಲಿ ಅತ್ಯಂತ ಮುತುರ್ವಜಿ ವಹಿಸಿ, ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯಗಳು ಮತ್ತು ಕೇಂದ್ರ ಸರಕಾರದ ವಿನೂತನ ಯೋಜನೆಗಳ ಬಗ್ಗೆ ಜನಮಾನಸದಲ್ಲಿ ಅರಿವು ಮೂಡಿಸಿ, ಉತ್ತಮ ಜನಾಭಿಪ್ರಾಯವನ್ನು ಮತಗಳಾಗಿ ಪರಿವರ್ತಿಸುವ ಮೂಲಕ ಮುಂದಿನ ತಾ.ಪಂ., ಜಿ.ಪಂ. ಸಹಿತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಂಡ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಕುಯಿಲಾಡಿ ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಕಾರ್ಯಕರ್ತರು ರಾಜ್ಯಕ್ಕೇ ಮಾದರಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಪಕ್ಷದ ಕೆಲಸ ಕಾರ್ಯಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡಾಗ ಯಶಸ್ಸು ಶತಸಿದ್ಧ. ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು ಎರಡು ತಿಂಗಳು ಸಮೀಪಿಸುತ್ತಿದ್ದರೂ 5 ಉಚಿತಗಳ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ಜನತೆಗೆ ಮೋಸ ಎಸಗಿದೆ. ಈ ನಿಟ್ಟಿನಲ್ಲಿ ಕಾರ್ಯಕಾರಿಣಿ ಸಭೆಗಳಲ್ಲಿ ಚರ್ಚಿಸಿ ವಿಸ್ತ್ರತ ಹೋರಾಟ ನಡೆಸಬೇಕಾಗಿದೆ. ಬಿಜೆಪಿ ಜಿಲ್ಲಾ ಸಮಾವೇಶ ವ್ಯವಸ್ಥಿತವಾಗಿ ನಡೆದಿದೆ. ಪಕ್ಷ ನೀಡಿರುವ ಜುಲೈ ತಿಂಗಳ ಕಾರ್ಯ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಅತ್ಯಂತ ಪರಿಣಾಮಕಾರಿಯಾಗಿ ನಡೆಸಿ, ಮಗದೊಮ್ಮೆ ಸಂಘಟಿತ ಪ್ರಯತ್ನದ ಮೂಲಕ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ದೊಡ್ಡ ಅಂತರದ ಗೆಲುವಿಗೆ ತೊಡಗಿಸಿಕೊಳ್ಳಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಅನುಷ್ಠಾನ ಮತ್ತು ವರದಿಗಳ ಆನ್ ಲೈನ್ ಅಪ್ಲೋಡ್ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಪಕ್ಷ ಹಾಗೂ ಪರಿವಾರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿ, ಚಿತ್ರದುರ್ಗದ ಮಾಜಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್ ಮತ್ತು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ (ಆಂಧ್ರ, ಕರ್ನಾಟಕ, ತೆಲಂಗಾಣ) ಕೇಶವ ಹೆಗಡೆ ಇವರ ಅಕಾಲಿಕ ನಿಧನದ ಬಗ್ಗೆ ಸಭೆಯಲ್ಲಿ ನುಡಿ ನಮನ ಹಾಗೂ ಶೃದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು