ಉಡುಪಿ : ಭಾರತದ ಅವಿಭಾಜ್ಯ ಅಂಗ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಅಲ್ಲಿನ ಹಿಂದೂಗಳ ಬದುಕನ್ನು ನರಕ ಸದೃಶ ಮಾಡಿದ್ದ 370ನೇ ವಿಧಿ ರದ್ದತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ಐತಿಹಾಸಿಕ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.
ಸುಪ್ರೀಂ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ. ನ್ಯಾಯ ಸಮ್ಮತ ತೀರ್ಪಿನಿಂದ ದೇಶದ ಏಕತೆ ಮತ್ತು ಅಖಂಡತೆಗೆ ಸವಾಲು ಒಡ್ಡಿದ್ದ ವಿಭಜನಕಾರಿ ಕಾಂಗ್ರೆಸ್ಸಿಗೆ ಕಪಾಳ ಮೋಕ್ಷ ಆದಂತಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ದೇಶ ವಿಭಜನೆಯ ಕರಾಳ ಇತಿಹಾಸ ಸೃಷ್ಟಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ ಪುನಃ 370ನೇ ವಿಧಿಯನ್ನು ಜಾರಿಗೆ ತರುತ್ತೇವೆ ಎನ್ನುತ್ತಿರುವುದು ಕಾಂಗ್ರೆಸ್ಸಿನ ವಿಭಜನಕಾರಿ ಮನಸ್ಥಿತಿಗೆ ಜ್ವಲಂತ ಸಾಕ್ಷಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಗೆ ನಾಂದಿ ಹಾಡಿರುವ 370ನೇ ವಿಧಿ ರದ್ದತಿ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಮಾನ್ಯತೆಯ ಮುದ್ರೆ ಒತ್ತಿರುವುದು ಮೋದಿ ಸರಕಾರದ ಅದ್ವಿತೀಯ ಸಾಧನೆಗೆ ಮತ್ತೊಂದು ಗರಿ ಇಟ್ಟಂತಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ