Home » ಬೆಂಗಳೂರಲ್ಲಿ ಬಾಂಬ್‌ ಬ್ಲಾಸ್ಟ್‌
 

ಬೆಂಗಳೂರಲ್ಲಿ ಬಾಂಬ್‌ ಬ್ಲಾಸ್ಟ್‌

by Kundapur Xpress
Spread the love

ಬೆಂಗಳೂರು : ಭಾರಿ ಜನ ಸೇರುವ ರಾಜಧಾನಿಯ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಶುಕ್ರವಾರ ಸುಧಾರಿತ ಸ್ಫೋಟಕ ವಸ್ತು (ಐಇಡಿ) ಸಿಡಿದು 10ಕ್ಕೂ ಹೆಚ್ಚಿನ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೋಟೆಲ್‌ಗೆ ಗ್ರಾಹಕನ ಸೋಗಿನಲ್ಲಿ ಬಾಂಬ್ ತುಂಬಿದ್ದ ಬ್ಯಾಗ್ ತಂದಿಟ್ಟು ದುಷ್ಕರ್ಮಿ ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಗಳು ಕೃತ್ಯದ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ 9 ವರ್ಷಗಳ ಬಳಿಕ ಸಿಲಿಕಾನ್ ಸಿಟಿಬೆಂಗಳೂರಿನ ಮೇಲೆ ಉಗ್ರರ ವಕ್ರದೃಷ್ಟಿ ಬಿದ್ದಂತೆ ಕಾಣುತ್ತಿದೆ. 2013 ರ ಚುನಾವಣಾ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಕಚೇರಿ ಸಮೀಪ ಇದೇ ರೀತಿ ಬಾಂಬ್ ಸ್ಪೋಟವಾಗಿತ್ತು. ಈಗ ಲೋಕಸಭಾ ಚುನಾವಣೆ ಅಖಾಡ ಸಿದ್ಧವಾಗುತ್ತಿರುವ ಸಮಯದಲ್ಲೇ ಮತ್ತೆ ವಿಧ್ವಂಸಕ ಕೃತ್ಯ ನಡೆದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ನಗರದ ಎಚ್‌ಎಎಲ್ ಸಮೀಪದ ಕುಂದಲಹಳ್ಳಿಯ ಐಟಿಪಿಎಲ್‌ ರಸ್ತೆಯಲ್ಲಿರುವ ದಿ ರಾಮೇಶ್ವರ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ 12.45ರ ಸುಮಾರಿಗೆ ಬಾಂಬ್ ಸ್ಪೋಟವಾಗಿದೆ. ಹೋಟೆಲ್‌ನಲ್ಲಿ ಊಟದ ಸಮಯವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದರು. ಅದೇ ವೇಳೆ ಕೈ ತೊಳೆಯುವ ಪ್ರದೇಶದಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡಿದೆ.

ಈ ಸ್ಪೋಟದ ಶಬ್ದಕ್ಕೆ ಕೆಲವರು ಆತಂಕಗೊಂಡು ಹೋಟೆಲ್‌ನಿಂದ ಓಡಿ ಹೋಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಖಾಸಗಿ ಕಂಪನಿ ಉದ್ಯೋಗಿಗಳಾದ ಫಾರೂಕ್, ದೀಪಾಂಶು, ನವ್ಯಾ, ಶ್ರೀನಿವಾಸ್, ಮೋವಿ, ಬಲರಾಮ್ ಕೃಷ್ಣನ್, ಮೋಹನ್ ಹಾಗೂ ಸ್ವರ್ಣಾಂಬ ಸೇರಿದಂತೆ ಕೆಲವರನ್ನು ತಕ್ಷಣವೇ ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

   

Related Articles

error: Content is protected !!