ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರಕರಣದ ಬೆನ್ನಲ್ಲೇ 60 ವರ್ಷಗಳಷ್ಟು ಹಳೆಯ ಸೇತುವೆ ಕುಸಿದಿದೆ. ಸೇತುವೆಯಲ್ಲಿ ಸಂಚಾರ ಮಾಡುತ್ತಿದ್ದ ತಮಿಳುನಾಡಿನ ಲಾರಿ ಚಾಲಕ ಲಾರಿ ಸಮೇತನಾಗಿ ಕಾಳಿ ನದಿಗೆ ಉರುಳಿ ಬಿದ್ದಿದ್ದಾನೆ. ಆದರೆ ಮೀನುಗಾರರು ಚಾಲಕನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರವಾರದ ಕೋಡಿಬಾಗ್ ಎಂಬಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 60 ವರ್ಷಗಳಷ್ಟು ಹಳೆಯ ಸೇತುವೆ ಇದಾಗಿದ್ದು ಮಧ್ಯರಾತ್ರಿ ಸೇತುವೆ ಏಕಾಏಕಿ ಕುಸಿದಿದೆ. ರಾತ್ರಿಯ ಸಮಯವಾಗಿದ್ದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜನರ ಸಂಚಾರ ಇರಲಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸೇತುವೆ ಕುಸಿಯುವ ವೇಳೆಯಲ್ಲಿ ತಮಿಳುನಾಡಿನ ಲಾರಿ ಚಾಲಕ ಮುರುಗನ್ ಎಂಬಾತ ಸೇತುವೆಯ ಮೇಲೆ ಲಾರಿಯನ್ನು ಚಲಾಯಿಸುತ್ತಿದ್ದ. ಆದರೆ ಒಮ್ಮಿಂದೊಮ್ಮೆಲೆ ಸೇತುವೆ ತುಂಡಾಗಿ ನದಿಗೆ ಉರುಳಿದ ಹಿನ್ನೆಲೆಯಲ್ಲಿ ಮುರುಗನ್ ಲಾರಿ ಸಮೇತ ನದಿಗೆ ಬಿದ್ದಿದ್ದಾನೆ. ಈ ವೇಳೆಯಲ್ಲಿ ಪೊಲೀಸರು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಲಾರಿ ಚಾಲಕನನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸದ್ಯ ಚಾಲಕ ಮುರುಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.