ಉಡುಪಿ : ಎಐಸಿಸಿ ಪ್ರತಿನಿಧಿ ರಣದೀಪ್ ಸುರ್ಜೆವಾಲ ರಾಜ್ಯಕ್ಕೆ ಬಂದಿರುವುದು ಜನರ ಕಷ್ಟ ಕೇಳಲಿಕ್ಕೆ ಅಲ್ಲ ಅವರು ಬಂದಿರುವುದು ಕಪ್ಪ ವಸೂಲಿ ಮಾಡುವುದಕ್ಕೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.
ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಮೊಗಲರ ಕಾಲದಲ್ಲಿ ರಾಜನಿಗೆ ಕಪ್ಪ ಒಪ್ಪಿಸುನ ಪದ್ಧತಿ ಇತ್ತು. ಅದು ಇಂದು ಕಾಂಗ್ರೆಸ್‌ನಲ್ಲಿ ಜಾರಿಯಲ್ಲಿದೆ. ಅದನ್ನು ವಸೂಲಿ ಮಾಡುವುದಕ್ಕೆ ಸುರ್ಜೆವಾಲ ಬೆಂಗಳೂರಿಗೆ ಬಂದಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಜನರ ಕಷ್ಟ ಕೇಳುವ ಹವ್ಯಾಸ ಇಲ್ಲ ಎಂದವರು ಹೇಳಿದರು.
ಹಿಂದೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ದೆಹಲಿಗೆ ಕಪ್ಪ ಸಲ್ಲಿಸಲಿಲ್ಲ, ಅದಕ್ಕೆ ಅವರನ್ನು ಪದಚ್ಯುತಗೊಳಿಸಿದ್ದರು ಎಂದು ಸಿ ಟಿ ರವಿ ಉದಾಹರಿಸಿದರು.
ಡಿಕೆಶಿ ಮತ್ತು ಸಿದ್ದರಾಮಯ್ಯ ಕೈಗಳನ್ನು ಎತ್ತಿಹಿಡಿದು ಪೋಸ್ ಕೊಟ್ಟಿದ್ದಾರೆ, ಅವರು ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಭ್ರಷ್ಟಾಚಾರ ತಡೆಯುವ ವಿಷಯದಲ್ಲಿ ಜನರಿಗೆ ಕೈ ಎತ್ತಿ ಆಗಿದೆ, ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರಕ್ಕೆ ಶರಣಾಗಿದೆ ಎಂದು ವ್ಯಂಗ್ಯವಾಡಿದರು
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರ್ ರತ್ನಾಕರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಸ್ವಾಗತಿಸಿ, ಗಿರೀಶ್ ಎಮ್. ಅಂಚನ್ ವಂದಿಸಿದರು.

