ಬೈಂದೂರು : ಕಾಂಗ್ರೆಸ್ ಹಿಂದುತ್ವವನ್ನು ತುಳಿಯುವ ಕೆಲಸ ಮಾಡಿದರೆ, ಬಿಜೆಪಿ ಹಿಂದೂತ್ವ ಪ್ರತಿಪಾದಿಸುವ ನಾಯಕರನ್ನು ಕಡೆಗಣಿಸುವ ಕೆಲಸ ಮಾಡುತ್ತಿದೆ. ರಾಷ್ಟ್ರವಾದದ ಬದಲು ಜಾತಿವಾದ ಆರಂಭವಾಗಿದೆ ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಬೈಂದೂರಿನಲ್ಲಿ ಹೇಳಿದರು.
ರಾಷ್ಟ್ರಭಕ್ತ ಬಳಗದ ವತಿಯಿಂದ ಬುಧವಾರ ಬೈಂದೂರಿನ ಕಿರಿಮಂಜೇಶ್ವರದಲ್ಲಿ ಆಯೋಜಿಸಲಾದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ರಾಜಕಾರಣ ಮುಂದುವರಿದರೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮ ಆಗುತ್ತೆ ಎಂದರು.ಕರಾವಳಿಯ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಕಟಿಬದ್ಧವಾಗಿದ್ದೇನೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಕ್ಕೆ ಹಿಂದುತ್ವದ ಬಗ್ಗೆ ಆಸಕ್ತಿಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬದುಕಿದೆಯೋ ಸತ್ತಿದೆಯೋ ಗೊತ್ತಾಗುತ್ತಿಲ್ಲ. ಹುಬ್ಬಳ್ಳಿ ಪ್ರಕರಣದ ಆರೋಪಿಯನ್ನು ಗುಂಡಿಟ್ಟು ಕೊಲ್ಲಬೇಕಿತ್ತು. ಹಿಂದೂ ಸಮಾಜವನ್ನು ಜಾಗೃತಿ ಮಾಡಿ ವಿಶ್ವಾಸಕ್ಕೆ ತೆಗೆದು ಕೊಳ್ಳ ಬೇಕಿತ್ತು. ಹಿಂದುತ್ವದ ಪರ ಮಾತನಾಡುವವರನ್ನು ಬದಿಗೆ ಸರಿಸಿದ್ದಾರೆ. ಭಾಜಪಾದ ಅನೇಕ ನಾಯಕರು ಹಿಂದುತ್ವಕ್ಕಾಗಿ ತಪಸ್ಸು ಮಾಡಿದ್ದು ಇದೀಗಾ ಬಿಜೆಪಿಯಲ್ಲಿ ರಾಷ್ಟ್ರವಾದದ ಬದಲು ಜಾತಿ ವಾದ ಹೆಚ್ಚಿದೆ. ನಿಮ್ಮ ಜಾತಿವಾದಕ್ಕೆ ಈ ಚುನಾವಣೆಯಲ್ಲಿ ನಿಮ್ಮ ಮಗ ಬಲಿಯಾಗ್ತಾನೆ. ಯಡಿಯೂರಪ್ಪ ಮಗ ಮೋಸ ಮಾಡುವುದರಲ್ಲಿ ನಿಸ್ಸೀಮ. ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಮಂತ್ರಿ ಮಾಡ್ತೇನೆಂದು ನಂಬಿಸಿ ಮನೆಯಲ್ಲಿ ಕೂರಿಸಿದ ಶಾಪ ನಿಮ್ಮ ಮಗನಿಗೆ ತಟ್ಟುತ್ತದೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು
ಇದೇ ಸಂದರ್ಭದಲ್ಲಿ ಕಾರ್ಮಿಕ ದಿನಾಚರಣೆಯ ನಿಮತ್ತ ಪೌರ ಕಾರ್ಮಿಕರು ಹಾಗೂ ಈಜು ಪಟು ದಿನಕರ್ ಖಾರ್ವಿಯವರನ್ನು ಕೆ ಎಸ್ ಈಶ್ವರಪ್ಪ ಸನ್ಮಾನಿಸಿದರು