ಕುಂದಾಪುರ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ನವದೆಹಲಿಯ ರೈಲ್ವೆ ಭವನದಲ್ಲಿ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವರವರನ್ನು ಭೇಟಿ ಮಾಡಿ ಹಾಸನ-ಬೆಂಗಳೂರು ರೈಲ್ವೆ ವಿದ್ಯುದೀಕರಣವನ್ನು ಬೇಗನೆ ಮುಗಿಸುವಂತೆ ಮತ್ತು ಅದೇ ಸಂದರ್ಭದಲ್ಲಿ ಕರಾವಳಿ ರೈಲಿನ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ವಿನಂತಿಸಿದರು.
ಕೊಂಕಣ ರೈಲ್ವೇ ವಿಲೀನದ ಕುರಿತು ಮಹಾರಾಷ್ಟ್ರ ಸರಕಾರ ತನ್ನ ಒಪ್ಪಿಗೆ ತಿಳಿಸಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಸಂಬಂಧಪಟ್ಟ ರಾಜ್ಯಗಳ ಸಭೆ ಕರೆದು ವಿಲೀನದ ಕುರಿತು ಮುಂದಿನ ಕಾರ್ಯಗಳನ್ನು ಆರಂಭಿಸುವಂತೆ ಸಚಿವರನ್ನು ವಿನಂತಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಬೆಂಗಳೂರು ಹಾಗೂ ತಿರುಪತಿ ಎರಡೂ ಕಡೆ ತಲುಪಿಸುವ ರೈಲು ಸೇವೆ ಆರಂಭಿಸುವಂತೆ ಕೋರಿದ್ದು ಚಿಕ್ಕಮಗಳೂರು- ಬೆಂಗಳೂರು-ತಿರುಪತಿ ರೈಲಿಗಾಗಿ ರೈಲು ಮಂಡಳಿಯಲ್ಲಿ ಸಭೆ ನಡೆಸುವಂತೆ ವಿನಂತಿಸಿದರು.
ಸಂಸದ ಕೋಟ ಅವರ ಈ ಎಲ್ಲಾ ಮನವಿಗಳಿಗೆ ರೈಲ್ವೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು,ರೈಲು ಮಂಡಳಿಯಲ್ಲಿ ಸದ್ಯದಲ್ಲಿಯೇ ಸಭೆ ಕರೆದು ಈ ಎಲ್ಲಾ ವಿಷಯಗಳ ಕುರಿತು ಕ್ರಮಕೈಗೊಳ್ಳುವ ಕುರಿತು ಭರವಸೆ ನೀಡಿದರು

