Home » ಅಂದರ್–ಬಾಹರ್ ಇಸ್ಪೀಟ್ ಜುಗಾರಿ ಆಟ : ಪೊಲೀಸರ ದಾಳಿ
 

ಅಂದರ್–ಬಾಹರ್ ಇಸ್ಪೀಟ್ ಜುಗಾರಿ ಆಟ : ಪೊಲೀಸರ ದಾಳಿ

by Kundapur Xpress
Spread the love

ಶಂಕರನಾರಾಯಣ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿ ಅಕ್ರಮವಾಗಿ ಅಂದರ್–ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ಇಬ್ಬರು ಪರಾರಿಯಾದ ಘಟನೆ ನಡೆದಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ಕುಂದಾಪುರ ಗ್ರಾಮಾಂತರ ವೃತ್ತದ ಸಿ.ಪಿ.ಐ ಸಂತೋಷ್ ಎ. ಕಾಯ್ಕಿಣಿ ಅವರು ಮಾರ್ಚ್ 23 ರಂದು ಕುಂದಾಪುರದ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ನಡೆದ ಅಪರಾಧ ಸಭೆಯಲ್ಲಿ ಭಾಗವಹಿಸಿದ್ದ ವೇಳೆ, ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಪ್ರದೇಶದಲ್ಲಿರುವ ಸುಧಾಕರ ಶೆಟ್ಟಿ ಅವರ ಮನೆಯಲ್ಲಿ ಅಕ್ರಮವಾಗಿ ಜುಗಾರಿ ಆಟ ನಡೆಯುತ್ತಿರುವ ಕುರಿತು ಮಾಹಿತಿ ಲಭಿಸಿತು.

ಈ ಮಾಹಿತಿ ಆಧರಿಸಿ ಶಂಕರನಾರಾಯಣ ಪೊಲೀಸ್ ಠಾಣೆಯ ಪಿ.ಎಸ್.ಐ ಅಕ್ಷಯ ಕುಮಾರಿ ಎಸ್‌.ಎನ್‌ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ನ್ಯಾಯಾಲಯದ ಅನುಮತಿ ಪಡೆದು ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು. ಈ ವೇಳೆ ಸುಧಾಕರ ಶೆಟ್ಟಿ ಅವರ ಮನೆಯ ಆವರಣದಲ್ಲಿ ಆರು ಮಂದಿ ವೃತ್ತಾಕಾರದಲ್ಲಿ ಕುಳಿತು ಹಣವನ್ನು ಪಣವಾಗಿಟ್ಟು ಅಂದರ್–ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದು ಪತ್ತೆಯಾಯಿತು.

ಪೊಲೀಸರು ಸುತ್ತುವರಿದು ದಾಳಿ ನಡೆಸುತ್ತಿದ್ದ ವೇಳೆ ಇಬ್ಬರು ಆರೋಪಿಗಳು ಮನೆಯ ಕಂಪೌಂಡ್ ಹಾರಿ ಪರಾರಿಯಾಗಿದ್ದು, ಉಳಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಧಾಕರ ಶೆಟ್ಟಿ (52), ರಮೇಶ್ (46), ಮನೋಹರ (46) ಹಾಗೂ ಮಹೇಶ್ (43) ಎಂದು ಗುರುತಿಸಲಾಗಿದೆ. ಪರಾರಿಯಾದವರು ಹರ್ಷ ಮತ್ತು ಕೃಷ್ಣ ಪೂಜಾರಿ ಎಂದು ತಿಳಿದುಬಂದಿದೆ.

ಬಂಧಿತರ ಬಳಿಯಿಂದ ಹಾಗೂ ಆಟ ನಡೆದ ಸ್ಥಳದಿಂದ ಒಟ್ಟು ₹6,700 ನಗದು, ಒಂದು ಕೆಂಪು-ಕಪ್ಪು ಬಣ್ಣದ ಬೆಡ್‌ಶೀಟ್ ಮತ್ತು 52 ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 19/2026ರಡಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

Related Articles

error: Content is protected !!