ಮಂಗಳೂರು : ಅಂಗದಾನ ನಡೆಸುವ ಪ್ರಕ್ರಿಯೆ ಸಂದರ್ಭ ಆರೋಗ್ಯದಲ್ಲಿ ಏಕಾಏಕಿ ಏರಿಳಿತವಾಗಿ ಯುವತಿಯೊಬ್ಬರು ತನ್ನ ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ.
ಮಂಗಳೂರಿನ ಪ್ರಸಿದ್ದ ಲೆಕ್ಕಪರಿಶೋಧಕರಾದ ಚೇತನ್ ಕಾಮತ್ ಎಂಬವರ ಪತ್ನಿ ವೃತ್ತಿಯಲ್ಲಿ ಉಪನ್ಯಾಸಕಿಯಾದ ಕೋಟೇಶ್ವರದ ಅರ್ಚನಾ ಕಾಮತ್ (33) ಮೃತ ದುರ್ದೈವಿ.
ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ತಂದೆ ಸಿ.ಎ ಸತೀಶ್ ಕಾಮತ್ ಅವರ ಸಹೋದರನ ಪತ್ನಿಗೆ ಲಿವರ್ ಕಾಯಿಲೆ ಇದ್ದ ಕಾರಣ ಬೆಂಗಳೂರಿನ ಆಪೋಲೊ ಆಸ್ಪತ್ರೆಯಲ್ಲಿ ಲಿವರ್ ಕಸಿ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು. ಹಲವಾರು ಡೋನರ್‌ಗಳ ಲಿವರ್ ಮ್ಯಾಚ್ ಆಗದ ಕಾರಣ ಚಿಕಿತ್ಸೆಗೆ ಹಿನ್ನೆಡೆಯಾಗುತ್ತಿತ್ತು. ಈ ವೇಳೆ ಅರ್ಚನಾ ಕಾಮತ್ ಅವರ ಲಿವರ್ ಅರ್ಗನ್ ಮ್ಯಾಚ್ ಆಗಿದ್ದ ಕಾರಣ ಅರ್ಚನಾ ಸಹಿತ ಕುಟುಂಬದ ಸದಸ್ಯರು ಲಿವರ್ ಡೊನೇಶನ್ ಗೆ ನಿರ್ಧರಿಸಿದ್ದರು
ಚಿಕಿತ್ಸಾ ಪೂರ್ವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ 12 ದಿನದ ಮೊದಲು ಲಿವರ್ ಟ್ರಾನ್ಸಫಾರ್ ಮಾಡಲಾಗಿತ್ತು. ಲಿವರ್ ಡೋನರ್ ಅರ್ಚನಾ ಕಾಮತ್ ಆರೋಗ್ಯದಿಂದಿದ್ದು 3 ದಿನಗಳ ಹಿಂದೆ ಅಪೋಲೊ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಈ ಮಧ್ಯೆ ಅವರ ಆರೋಗ್ಯದಲ್ಲಿ ಏರಿಳಿತವಾಗಿದ್ದರಿಂದ ಮತ್ತೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೆ ಬಹುಅಂಗಾಗ ವೈಫಲ್ಯಗೊಂಡು ಮೃತಪಟ್ಟಿರುವುದಾಗಿ ಭಾನುವಾರ ಆಸ್ಪತ್ರೆ ಮೂಲಗಳು ತಿಳಿಸಿದೆ. ಮೃತದೇಹವನ್ನು ಕರಂಗಲ್ಪಾಡಿಯ ನಿವಾಸಕ್ಕೆ ತಂದು ವಿಧಿವಿಧಾನ ನೆರವೇರಿಸಿದ ನಂತರ ಕೋಟೆಶ್ವರದಲ್ಲಿ ಕುಟಂಬಸ್ಥರ ಸಮ್ಮುಖದಲ್ಲಿ ಅಂತಿಮ ಕಾರ್ಯ ನೆರವೇರಿಸಲಾಗಿದೆ.
ಅರ್ಚನಾ ಕಾಮತ್ ನಿಧನಕ್ಕೆ ಸಂತಾಪ
ಅರ್ಚನಾ ಕಾಮತ್ ಅವರ ನಿಧನಕ್ಕೆ ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಸಂತಾಪ ಸೂಚಿಸಿದ್ದಾರೆ.