ಉಡುಪಿ : ಸೆ.2ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಜೆಪಿ ಸದಸ್ಯತಾವನ್ನು ಪಡೆಯುವ ಮೂಲಕ ರಾಷ್ಟ್ರಾದ್ಯಂತ ‘ಬಿಜೆಪಿ ಸದಸ್ಯತಾ ಅಭಿಯಾನ-2024’ಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಸಮಸ್ತ ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು 8800002024 ಕ್ಕೆ ಮಿಸ್ಡ್ ಕಾಲ್ ನೀಡಿ ಬಿಜೆಪಿ ಸದಸ್ಯತನ ಪಡೆಯುವ ಮೂಲಕ ಜಿಲ್ಲೆಯಾದ್ಯಂತ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ‘ಬಿಜೆಪಿ ಸದಸ್ಯತ್ವ ಅಭಿಯಾನ 2024’ರ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸೆ.2ರಿಂದ ಸೆ.25 ಮತ್ತು ಅ.1ರಿಂದ ಅ.15ರ ವರೆಗೆ 2 ಹಂತಗಳಲ್ಲಿ ನಡೆಯುವ ‘ಬಿಜೆಪಿ ಸದಸ್ಯತಾ ಅಭಿಯಾನ’ದಲ್ಲಿ ಮಿಸ್ಡ್ ಕಾಲ್, ಕ್ಯೂ.ಆರ್. ಕೋಡ್ ಸ್ಕ್ಯಾನ್ ಮತ್ತು ನಮೋ ಆಪ್ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತನ ನೊಂದಾವಣೆ ಮಾಡುವ ಜೊತೆಗೆ ಅ.16ರಿಂದ ಅ.30ರ ವರೆಗೆ ನಡೆಯುವ ಸಕ್ರಿಯ ಸದಸ್ಯತಾ ಅಭಿಯಾನದಲ್ಲಿ ಕೂಡಾ ಅತ್ಯಂತ ಹುಮ್ಮಸ್ಸಿನಿಂದ ಪಾಲ್ಗೊಳ್ಳಬೇಕು ಎಂದರು.ಆ.30 ಮತ್ತು 31ರಂದು ಮಂಡಲ ಮಟ್ಟದಲ್ಲಿ ಸದಸ್ಯತಾ ಅಭಿಯಾನದ ಮಾಹಿತಿ ಕಾರ್ಯಾಗಾರಗಳು ನಡೆಯಲಿವೆ. ಪ್ರತೀ ಬೂತ್ ಗಳಲ್ಲಿ ಕನಿಷ್ಠ 300 ಮೇಲ್ಪಟ್ಟು ಸದಸ್ಯರನ್ನು ನೊಂದಾಯಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ನೊಂದಾವಣೆ ಆಗುವಂತೆ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದರು
ಸಂಘಟನಾತ್ಮಕವಾಗಿ ಕರಾವಳಿ ಕರ್ನಾಟಕದ ಭದ್ರ ಕೋಟೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಇದ್ದಾರೆ. ರಾಜ್ಯದಲ್ಲೇ ಎಲ್ಲೂ ಇಲ್ಲದ ಸಕಾರಾತ್ಮಕ ವಾತಾವರಣ ಉಡುಪಿ ಜಿಲ್ಲೆಯಲ್ಲಿದೆ. ಇದರ ಸದುಪಯೋಗವನ್ನು ಪಡೆಯುವ ಮೂಲಕ ಪಕ್ಷದ ಜವಾಬ್ದಾರಿಯುತ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪ್ರಯತ್ನದ ಮೂಲಕ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸುವ ಪಣತೊಟ್ಟು ನಿಗದಿತ ಗುರಿಯನ್ನು ತಲುಪಬೇಕು ಎಂದು ಅವರು ತಿಳಿಸಿದರು.