ಮೈಸೂರು : ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಅವನತಿಯ ತುತ್ತ ತುದಿಯಲ್ಲಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿಕೂಟ ತುಕಡೆ ಗ್ಯಾಂಗ್ನಂತಿದೆ. ಕಾಂಗ್ರೆಸ್ಸಿಗರು ತುಕಡೆ ಗ್ಯಾಂಗ್ನ ಸುಲ್ತಾನರು. ಈ ದೇಶವನ್ನು ವಿಭಜಿಸುವ, ದುರ್ಬಲಗೊಳಿಸುವ ಅಪಾಯಕಾರಿ ಮನಸ್ಥಿತಿಯನ್ನು ಪ್ರತಿಪಕ್ಷದ ನಾಯಕರು ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಮೋದಿ, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ- ಜೆಡಿಎಸ್ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ಪಕ್ಷವು ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡ ಮೋದಿ, ಮೈತ್ರಿಕೂಟದ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದರು.