ಭಾರತೀಯ ದರ್ಶನ, ಶಾಸ್ತ್ರಪಾಠಗಳ ಮೂಲಕ ವಿದ್ವಾಂಸರನ್ನು ಸೃಷ್ಟಿಸುತ್ತಿದ್ದ ವಿದ್ಯಾಪೀಠಗಳು, ಸರಕಾರಿ ವಿವಿಗಳು, ಪಾಠಶಾಲೆಗಳು ಭವ್ಯ ಕಟ್ಟಡವಿದ್ದರೂ ಶಿಥಿಲವಾಗಿವೆ, ವಿದ್ವಾಂಸರು ವಿರಳವಾಗಿದ್ದಾರೆ ಅಧ್ಯಯನ ಶೋಚನೀಯವಾಗಿದ್ದು ಅಧ್ಯಯನ ವಿವಿಗಳಂತೂ ಆರ್ಥಿಕವಾಗಿ ತೊಂದರೆಯಲ್ಲಿವೆ ಎಂದು ಬೆಂಗಳೂರಿನ ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಹೇಳಿದ್ದಾರೆ. ಅವರು ಹಿರಿಯಡ್ಕದ ಶ್ರೀಪುತ್ತಿಗೆ ಮೂಲ ಮಠದಲ್ಲಿರುವ ಶ್ರೀ ಪುತ್ತಿಗೆ ವಿದ್ಯಾಪೀಠದಲ್ಲಿ (ಲೌಕಿಕ ವೈದಿಕ ವಿದ್ಯಾಕೇಂದ್ರ) ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಪೀಠಾರೋಹಣದ ಸುವರ್ಣೋತ್ಸವ ಅಂಗವಾಗಿ ನೂತನ ಸುವರ್ಣ ಸ್ಮೃತಿ ಸೌಧದ ಸಮರ್ಪಣೆ ಸಮಾರಂಭದಲ್ಲಿ ಭಾನುವಾರ ಆಶೀರ್ವಚನ ನೀಡಿದರು.
ವಿದ್ಯಾಪೀಠಗಳಲ್ಲಿ ಬೆರಳಣಿಕೆಯ ವಿದ್ಯಾರ್ಥಿಗಳಿದ್ದರೂ ಸಮರ್ಥವಾಗಿ ಪಾಠ ಹೇಳುವ ವಿದ್ವಾಂಸರ ಕೊರತೆಯಿದೆ, ಪ್ರತಿಭಾವಂತರಿಗೆ ಅವಕಾಶವಿಲ್ಲ ಖಾಲಿ ಹುದ್ದೆ ತುಂಬುವ ಬದಲು ಗೌರವ, ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಠಗಳು ವಿದ್ವಾಂಸರ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಪುತ್ತಗೆ ಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಪಿ.ಎಸ್.ದಿನೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಶ್ರೀದುರ್ಗಪರಮೇಶ್ವರಿ ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉಜಿರೆಯ ದಯಾಕರ್, ಅಖಿಲ ಕರ್ನಾಟಕ’ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬಿ.ಎಸ್.ರಾಘವೇಂದ್ರ ಭಟ್, ಕುಂದಾಪುರ ದುರ್ಗಾಂಬಾ ಮೋಟಾರ್ಸ್ ಕೃಷ್ಣಾನಂದ ಛಾತ್ರ, ಬೆಂಗಳೂರಿನ ವಿದ್ವಾಂಸ ಚತುರ್ವೇದಿ ವೇದವ್ಯಾಸಾಚಾರ್, ರವೀಶ ತಂತ್ರಿ ಕುಂಟಾರು, ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ.ಮಧುಸೂದನ ಭಟ್, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ – ಉಪಾಧ್ಯಾಯ, ಮಂಗಳೂರಿನ ಶಾರದಾ ಸಮೂಹ ವಿದ್ಯಾಲಯದ ಅಧ್ಯಕ್ಷ ಪ್ರೊ ಎಂ.ಬಿ.ಪುರಾಣಿಕ್ ಉಪಸ್ಥಿತರಿದ್ದರು. ಪುತ್ತಿಗೆ ಶ್ರೀವಿದ್ಯಾಪೀಠದ ಪ್ರಿನ್ಸಿಪಾಲ್ ಸುನಿಲ್ ಆಚಾರ್ಯ ಸ್ವಾಗತಿಸಿದರು. ಶ್ರೀವಾದಿರಾಜ ಸಂಶೋಧನಾ ಕೇಂದ್ರ ನಿರ್ದೇಶಕ ಬಿ.ಗೋಪಾಲ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಯೋಗೀಂದ್ರ ಭಟ್ ಉಳಿ ನಿರೂಪಿಸಿದರು.