ಬೈಂದೂರು: ಸಾಗರದ ಪರಿಸರ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವವು ಕಡಲಾಮೆಗಳು. ಭೂಮಿಯ ಮೇಲೆ ಕಡಲಾಮೆಗಳದ್ದು ಬಹು ದೀರ್ಘ ಇತಿಹಾಸ. ಅವು ಹದಿನೈದು ಕೋಟಿ ವರ್ಷಗಳಷ್ಟು ಹಿಂದಿನಿಂದ ಭೂಮಿಯ ಮೇಲೆ ಇವೆ. ಹಾಗೆಯೇ ಅವುಗಳ ಆಯುಷ್ಯವೂ ಸುದೀರ್ಘ. ನೂರೈವತ್ತು ವರ್ಷಗಳಿಗೂ ಮೀರಿ ಅವು ಬದುಕುತ್ತವೆ.
ಕಡಲಾಮೆಗಳ ಸ್ಥಿರವಾದ ವಾಸಸ್ಥಾನ ಸಮುದ್ರವೇ ಆದರೂ, ಅವು ಸಂತಾನವರ್ಧನೆಗೆ ಮಾತ್ರ ನೆಲಕ್ಕೆ ಬರಲೇಬೇಕು. ಇದು ಅವುಗಳ ವೈಶಿಷ್ಟ್ಯ. ಪ್ರತಿ ವರ್ಷಕ್ಕೊಮ್ಮೆ ವಯಸ್ಕ ಹೆಣ್ಣು ಕಡಲಾಮೆಗಳು ಕಡಲಂಚಿನ ಮರಳ ತೀರಕ್ಕೆ ಬರುತ್ತವೆ. ಮರಳಲ್ಲಿ ಗುಳಿ ತೋಡಿ ಸುಮಾರು ಒಂದು ನೂರು ಮೊಟ್ಟಿಗಳನ್ನಿಟ್ಟು ಮರಳನ್ನು ಮುಚ್ಚಿ ಹಿಂದಿರುಗುತ್ತವೆ.
ಆದರೆ ಇತ್ತೀಚಿನ ದಿನಗಳಲ್ಲಿ ಸಮುದ್ರ ತೀರಗಳಲ್ಲಿ ಹೆಚ್ಚಿದ ಮಾಲಿನ್ಯದಿಂದಾಗಿ, ಕಡಲಾಮೆಗಳು ಮೊಟ್ಟೆ ಇಡಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ.
ಇಂಥ ಸಂದರ್ಭದಲ್ಲಿ ಬೈಂದೂರಿನಲ್ಲೊಂದು ಅಪರೂಪದ ಘಟನೆ ನಡೆದಿದೆ. ಸುಮಾರು ಹದಿನೈದು ವರ್ಷಗಳ ಬಳಿಕ, ಬೈಂದೂರಿನ ಸೋಮೇಶ್ವರ ಕಡಲತೀರದಲ್ಲಿ ಕಡಲಾಮೆ ಬಂದು ಮೊಟ್ಟೆ ಇಟ್ಟಿದೆ. ಇದಕ್ಕೆ ಕಾರಣ ಕೇಳಿದ್ರೆ ನೀವು ಆಶ್ಚರ್ಯ ಪಡೋದು ಖಂಡಿತ.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು, ‘ಸಮೃದ್ಧ ಬೈಂದೂರು’ ಯೋಜನೆಯ ಅಡಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಇರುವುದು ಬಹುಶಃ ನಿಮಗೆಲ್ಲಾ ಗೊತ್ತಿರಬಹುದು. ಆ ಯೋಜನೆಗಳಲ್ಲಿ, ‘ಕ್ಲೀನ್ ಕಿನಾರ’ ಯೋಜನೆಯೂ ಒಂದು. ಈ ಕ್ಲೀನ್ ಕಿನಾರ ಯೋಜನೆಗೆ ಪ್ರಕೃತಿಯೇ ಸ್ವತಃ ಧನ್ಯವಾದ ಹೇಳಿದ ಪರಿ ಇದು. ಕ್ಲೀನ್ ಕಿನಾರದಿಂದಾಗಿ ಸ್ವಚ್ಚವಾದ ಬೈಂದೂರಿನ ಕಡಲ ತೀರಕ್ಕೆ ಕಡಲಾಮೆ ಬಂದು ಮೊಟ್ಟೆ ಇಟ್ಟು, ಪರಿಸರ ಪ್ರೇಮಿಗಳಿಗೆ ಸಂತಸ ನೀಡಿತ್ತು.
ಕಡಲಾಮೆಯ ಮೊಟ್ಟೆಗಳಿಗೆ ಯಾವುದೇ ಅಪಾಯ ಆಗದಂತೆ ಸಂರಕ್ಷಿಸಲು ಅಗತ್ಯ ಕ್ರಮಗಳನ್ನೂ ಇಲ್ಲಿ ಕೈಗೊಳ್ಳಲಾಗಿತ್ತು. ಅಲ್ಲದೆ, ಸ್ವತಃ ಬೈಂದೂರು ಶಾಸಕರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಕಡಲಾಮೆಯ ಮೊಟ್ಟೆಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸಿದ್ದರು.
ಇದೀಗ ಈ ಎಲ್ಲಾ ಪ್ರಯತ್ನಗಳಿಗೆ ಪ್ರತಿಫಲ ದೊರೆತಿದೆ. ಆ ಕಡಲಾಮೆಯ ಮೊಟ್ಟೆಗಳು ಒಡೆದು ಪುಟಾಣಿ ಮರಿಗಳು ಹೊರಬಂದಿದ್ದು, ಎಂಟು ವಾರಗಳ ಸತತ ಪರಿಶ್ರಮ ಸಾರ್ಥಕವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಸ್ವಚ್ಛ ಭಾರತ’ ಎಂಬ ಕಲ್ಪನೆಗೆ ಇದೂ ಕೂಡ ಒಂದು ಕೊಡುಗೆಯಾಗಿ ಮೂಡಿಬಂದಿದೆ.
ಈ ಮೂಲಕ, ಕೇವಲ ಮನುಷ್ಯನ ಏಳಿಗೆಗಾಗಿ ಮಾತ್ರವಲ್ಲದೆ ಪ್ರಕೃತಿಯ ಸಮಸ್ತ ಜೀವ ಸಂಕುಲಗಳ ಉನ್ನತಿಗೂ ಸಮೃದ್ಧ ಬೈಂದೂರು ಆಶಾಕಿರಣವಾಗುತ್ತಿದೆ