ಉಡುಪಿ : ಮೂರು ಬಾರಿ ಶಾಸಕರಾಗಿರುವ ರಘುಪತಿ ಭಟ್ ಅವರಿಗೆ ಪಕ್ಷ ಅವಕಾಶ ನೀಡಿಲ್ಲ ಎನ್ನುವುದು ಸರಿಯಲ್ಲ. ಅಭ್ಯರ್ಥಿಯಾಗಿಸಿಲ್ಲ ಎಂಬ ಕಾರಣಕ್ಕೆ ಕರಾವಳಿಗೆ ಅನ್ಯಾಯವಾಗಿದೆ ಎನ್ನುವುದನ್ನು ಒಪ್ಪಲಾಗದು. ಕೆ. ರಘುಪತಿ ಭಟ್ ಅವರಿಗೆ ಸ್ಪರ್ಧೆಯಿಂದ ನಿವೃತ್ತಿ ಪಡೆಯಲು 24 ಗಂಟೆಗಳ ಗಡುವು ನೀಡಲಾಗಿದೆ. ತಪ್ಪಿದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಪಕ್ಷದ ಸೂಚನೆ ಅನುಸರಿಸಿ ಅಭ್ಯರ್ಥಿಗಳ ಗೆಲುವಿಗೆ ಯತ್ನಿಸಬೇಕು. ಅದು ಬಿಟ್ಟು ಬೇರೇನು ಮಾಡಿದರೂ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಸೂಕ್ತ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದರು. ಶಾಸಕ, ಸ್ನೇಹಿತ, ಪಕ್ಷದ ಹಿರಿಯ ಕಾರ್ಯಕರ್ತ ಎಂಬ ನೆಲೆಯಲ್ಲಿ ರಘುಪತಿ ಭಟ್ ಅವರಿಗೆ ಸಾಕಷ್ಟು ಹೇಳಿಯಾಗಿದೆ. ಪಕ್ಷದ ವರಿಷ್ಠರೂ ಮಾತುಕತೆ ನಡೆಸುತ್ತಿದ್ದಾರೆ. ಭಟ್ ಸ್ಪರ್ಧೆಯಿಂದ ಹಿಂದೆ ಸರಿಯುವ ವಿಶ್ವಾಸ ಇದೆ. ಬಿಜೆಪಿ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ ಹಾಗೂ ಭೋಜೀಗೌಡ ಅವರ ಗೆಲುವಿಗೆ ಪಕ್ಷ ನಾಯಕರು, ಕಾರ್ಯಕರ್ತರು ಶ್ರಮಿಸುತ್ತಿದ್ದೇವೆ ಎಂದರು