Home » ತೆರಿಗೆ ಪಾವತಿ ರಶೀದಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಉಡುಪಿ ನಗರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
 

ತೆರಿಗೆ ಪಾವತಿ ರಶೀದಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಉಡುಪಿ ನಗರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

by Kundapur Xpress
Spread the love

ಉಡುಪಿ : ನಗರ ಸಭೆಯಲ್ಲಿ ತೆರಿಗೆ ಪಾವತಿ ರಶೀದಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಉಡುಪಿ ನಗರ ವತಿಯಿಂದ ನಗರಾಧ್ಯಕ್ಷ ದಿನೇಶ್ ಅಮೀನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ನಗರಸಭೆಯಲ್ಲಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಗರಸಭೆಯ ಪೌರಾಯುಕ್ತರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ತಿಳಿದು ಬಂದಿರುತ್ತದೆ. ಮೇಲ್ನೋಟಕ್ಕೆ ಆರೋಪಿಗಳೆಂದು ಕಂಡು ಬಂದಿರುವ ಮೂರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ತೆರಿಗೆ ಪಾವತಿ ಚಲನ್ ಗಳಿಗೆ ನಕಲಿ ಬ್ಯಾಂಕ್ ಸೀಲ್ ಬಳಸಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸಾರ್ವಜನಿಕರಲ್ಲಿ ಗೊಂದಲ ಹಾಗೂ ಸಂಶಯ ಮೂಡಿಸಿದೆ. ದಿನಂಪ್ರತಿ ಇಂತಹ ನಕಲಿ ರಶೀದಿ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಉಡುಪಿ ನಗರ ಸಭೆ ತನ್ನದೇ ಆದ ಘನತೆ, ಗೌರವ ಹಾಗೂ ಹಿರಿಮೆಯನ್ನು ಹೊಂದಿದ್ದು ಇಂತಹ ಪ್ರಕರಣಗಳಿಂದ ತೆರಿಗೆದಾರರು ಆತಂಕಕ್ಕೆ ಒಳಗಾಗಿರುವುದಲ್ಲದೆ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಉಡುಪಿ ನಗರಸಭೆಯಲ್ಲಿ ಇತ್ತೀಚೆಗೆ ಸಾರ್ವಜನಿಕರ ಹಣ ದುರುಪಯೋಗದ ಬಹಳಷ್ಟು ಸುದ್ದಿಗಳು ಕೇಳಿ ಬರುತ್ತಿದ್ದು, ಸದ್ರಿ ಪ್ರಕರಣವು ಗಂಭೀರ ಸ್ವರೂಪ ಹೊಂದಿರುವ ಸಾಧ್ಯತೆ ಇರುವುದರಿಂದ, ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಬ್ಯಾಂಕಿನ ಹಾಗೂ ನಗರಸಭೆಯ ನೌಕರರು ಮತ್ತು ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನಾತ್ಮಕ ಪ್ರಕರಣ ದಾಖಲಿಸಿ, ಸಮಗ್ರ ಇಲಾಖಾ ತನಿಖೆಗೆ ಒಳಪಡಿಸುವ ಜೊತೆಗೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಲ್ಲಾ ಆರೋಪಿಗಳನ್ನು ಕಾನೂನಾತ್ಮಕ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಅಗ್ರಹಿಸಲಾಗಿದೆ.

 

Related Articles

error: Content is protected !!