ಕಾರ್ಯಕರ್ತರನ್ನು ಗುರುತಿಸುವ ಪಕ್ಷ ಭಾರತೀಯ ಜನತಾ ಪಾರ್ಟಿ : ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ! ಎಮ್. ನಾಗರಾಜ್

by Kundapur Xpress
Spread the love

ಪಕ್ಷ ನಿಷ್ಠೆ ಮತ್ತು ಬದ್ಧತೆಯಿಂದ ನಿರ್ಲಿಪ್ತ ಸೇವೆಯಲ್ಲಿ ತೊಡಗಿಸಿಕೊಂಡಾಗ ಪಕ್ಷದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಪಕ್ಷ ನನ್ನ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಉನ್ನತ ಜವಾಬ್ದಾರಿಯನ್ನು ನೀಡಿರುವುದು ಕಾರ್ಯಕರ್ತನಿಗೆ ಸಂದ ಗೌರವ. ಕಾರ್ಯಕರ್ತರನ್ನು ಗುರುತಿಸುವ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ನೂತನ ರಾಜ್ಯಸಭಾ ಸದಸ್ಯ ಪ್ರೊ! ಎಮ್. ನಾಗರಾಜ್ ಹೇಳಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯತಂಡದ ಸಭೆಯಲ್ಲಿ ಪಕ್ಷದ ವತಿಯಿಂದ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ದೇಶದ ಸಾರ್ವಬೌಮತೆ ಮತ್ತು ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ದೇಶದ ನೀತಿ ನಿರೂಪಣೆ ಆಗುತ್ತಿವೆ ವಿನಹ ವಿದೇಶಿ ನೀತಿಯ ಅನುಕೂಲಕ್ಕಲ್ಲ. ಬಿಜೆಪಿಯ ಅಧಿಕಾರವನ್ನು ಜೀರ್ಣಸಿಕೊಳ್ಳಲಾಗದ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಷಡ್ಯಂತ್ರದ ವಿರುದ್ಧ ಪರಿಣಾಮಕಾರಿಯಾದಂತಹ ಹೋರಾಟ ರೂಪಿಸುವ ಅಗತ್ಯವಿದೆ. ರಾಷ್ಟ್ರದ ಸ್ವಾಭಿಮಾನದ ಸಂಕೇತವಾಗಿರುವ ವಂದೇ ಮಾತರಂಗೆ ಅಗೌರವ ತೋರಿದ ಕಾಂಗ್ರೆಸ್ ಮಾನಸಿಕತೆ ಅತ್ಯಂತ ಶೋಚನೀಯ. ಹಣ ಲೂಟಿ, ಅಲ್ಪಸಂಖ್ಯಾತ ತುಷ್ಟೀಕರಣದ ಸರಕಾರ ರಾಜ್ಯದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.

ಪ್ರಧಾನಿ ಮೋದಿ ಅವರ ಸದೃಢ ಭಾರತ ನಿರ್ಮಾಣದ ಕನಸಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿ ಅವರ ಸುಧೀರ್ಘ 25 ವರ್ಷಗಳ ಸೇವೆಯ ಪ್ರಯುಕ್ತ ದೇಶಾದ್ಯoತ ನಡೆಯುವ ಸೇವಾ ಸಂಕಲ್ಪ ಅಭಿಯಾನವನ್ನು ಸಾಧನೆಗಳ ಪ್ರಚಾರ ಹಾಗೂ ವಿವಿಧ ವಿಶೇಷ ಸೇವಾ ಕಾರ್ಯಗಳ ಮೂಲಕ ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಜಿಲ್ಲಾ ಕಾರ್ಯಾಲಯ ಭವನದ ಉಸ್ತುವಾರಿ ಸಮಿತಿಯ ಸಹಿತ ಪಕ್ಷದ ವಿವಿಧ ಸ್ತರದ ಜವಾಬ್ದಾರಿಗಳನ್ನು ನಿಭಾಯಿಸಿರುವ ಪ್ರೊ! ಎಮ್. ನಾಗರಾಜ್ ಅವರು ಇದೀಗ ಬಿಜೆಪಿ ಉಡುಪಿ ಜಿಲ್ಲಾ ಕಾರ್ಯಾಲಯದ ನೂತನ ಸಂಕೀರ್ಣದ ಪ್ರಗತಿಯ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವುದು ಅತೀವ ಸಂತಸ ತಂದಿದೆ ಎಂದರು.

ಎಸ್ಐಆರ್ 2ನೇ ಹಂತದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜೊತೆಗೆ ಸೆ.17ರಿಂದ ನಡೆಯುವ ಸೇವಾ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಆ.30ರಂದು ನಡೆಯುವ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ವೀಕ್ಷಣೆ, ಸರಲ್ ಆಪ್ ನಲ್ಲಿ ಫೋಟೋ-ವರದಿ ಅಪ್ಲೋಡ್ ಪ್ರಕ್ರಿಯೆಯಲ್ಲಿ 100% ಸಾಧನೆಗೈಯುವ ಜೊತೆಗೆ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ರಕ್ಷಾ ಬಂಧನ ಉತ್ಸವ ಆಚರಣೆಯನ್ನೂ ಹಮ್ಮಿಕೊಳ್ಳುವoತೆ ಕರೆ ನೀಡಿದರು.

ಸಭೆಯ ಪೂರ್ವದಲ್ಲಿ, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾಗಿ ಸುಮಾರು 35 ವರ್ಷಗಳಿಗೂ ಮಿಕ್ಕಿ ಸೇವೆ ಸಲ್ಲಿಸಿರುವ ಸುರೇಶ್ ಶೇರಿಗಾರ್ ಅಲೆವೂರು ಅವರ ನಿಧನದ ಗೌರವಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆಯೊಂದಿಗೆ ಭಾವಪೂರ್ಣ ಶೃದ್ದಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಐಆರ್ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಟ್ಟಾರ್ ರತ್ನಾಕರ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಾಜಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಪ್ರಮುಖರಾದ ಬಿ.ಎನ್. ಶಂಕರ ಪೂಜಾರಿ, ನಯನಾ ಗಣೇಶ್, ದಿನಕರ ಬಾಬು, ಸತ್ಯಾನಂದ ನಾಯಕ್ ಸಹಿತ ಜಿಲ್ಲಾ ಕಾರ್ಯ ತಂಡದ ಸಭೆಯ ಅಪೇಕ್ಷಿತರು, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಸ್ವಾಗತಿಸಿ, ಎಸ್ಐಆರ್ ಹಾಗೂ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ನುಡಿ ನಮನ ಸಲ್ಲಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ವಂದಿಸಿದರು.

 

Related Articles

error: Content is protected !!