ಕುಂದಾಪುರ: ಯಕ್ಷಗಾನ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುವ ಶ್ರೀಮಂತ ಕಲೆ. ಮನರಂಜನೆಯೊಂದಿಗೆ ಮುದ ನೀಡುವ ಯಕ್ಷಗಾನದ ಪಾತ್ರ ಮತ್ತು ಕಥೆಗಳ ಆದರ್ಶಗಳು ನಮ್ಮ ಬದುಕಿನ ಕೈ ಬೆಳಕು. ಜನಸಾಮಾನ್ಯರ ಬಯಲು ವಿಶ್ವವಿದ್ಯಾನಿಲಯ. ಇಂತಹ ಶ್ರೀಮಂತ ಕಲೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ರಾಮ್ಸನ್ ಸರ್ಕಾರಿ ಪ್ರೌಢಶಾಲೆ, ಕಂಡ್ಲೂರು ಇಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಕಂಡ್ಲೂರು ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷರಾದ ಶ್ರೀ ವಿಜಯ ಪುತ್ರನ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಸುರೇಶ್ ಭಟ್, ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಂಡ್ಲೂರು ಗ್ರಾಮ ಪಂಚಾಯತ್‍ನ ಸದಸ್ಯರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಉದಯ ಶೇರಿಗಾರ್, ಶ್ರೀಮತಿ ಲಕ್ಷ್ಮೀ ಶೆಟ್ಟಿ, ಶ್ರೀ ವಿಷ್ಣುಮೂರ್ತಿ ನಾಯಕ್ ಬೇಳೂರು ಯಕ್ಷ ಗುರುಗಳು ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಸಾನಿಧ್ಯ ಮತ್ತು ತಂಡದವರು ಪ್ರಾರ್ಥಿಸಿ, ಹಿರಿಯ ಶಿಕ್ಷಕರಾದ ಶ್ರೀ ವಿಷ್ಣು ಭಟ್ ಸ್ವಾಗತಿಸಿದರು. ಸಹ ಶಿಕ್ಷಕ ಸಂತೋಷ್ ನಿರೂಪಿಸಿ, ವಂದಿಸಿದರು.