ಕೋಟ : ಯಕ್ಷಗಾನ ಕಲೆ ಉಳಿದು ಬೆಳೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಸರಕಾರದಿಂದ ಬರುವ ಎಲ್ಲಾ ರೀತಿಯ ಅನುದಾನದ ಜೊತೆಗೆ ಈ ಭಾಗದ ಜನ ಪ್ರತಿನಿಧಿಗಳಾಗಿ ನಮ್ಮಿಂದ ಮಾಡಬಹುದಾದ ಹೆಚ್ಚಿನ ನೆರವನ್ನು ನೀಡುವಲ್ಲಿ ನಾವು ಸದಾ ಸಿದ್ಧರು. ಶ್ರೀಧರ ಹಂದೆ ಮತ್ತು ಕಾರ್ಕಡ ಶ್ರೀನಿವಾಸ ಉಡುಪರ ಸಾಲಿಗ್ರಾಮ ಮಕ್ಕಳ ಮೇಳ ಐವತ್ತು ವರ್ಷಗಳ ಸಾರ್ಥಕ ಇತಿಹಾಸವನ್ನು ಸೃಷ್ಟಿಸಿರುವುದು ಅಭಿನಂದನೀಯ. ಈ ಕಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಯಕ್ಷಗಾನ ಅಕಾಡೆಮಿ, ಉಡುಪಿ ಕಲಾರಂಗದ ಚಟುವಟಿಕೆಗಳು ಸ್ಮರಣಿಯ ಎಂದು ಕುಂದಾಪುರ ವಿಧಾನ ಸಭಾ ಶಾಸಕ ಕಿರಣ ಕುಮಾರ ಕೊಡ್ಗಿ ಹೇಳಿದರು
ಎ. 17ರ ಗುರುವಾರದಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕೋಟ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ ಎರಡು ದಿವಸಗಳ ಆಹ್ವಾನಿತ ತಂಡಗಳ ‘ಯಕ್ಷ ತ್ರಿವಳಿ’ಯಕ್ಷೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು
ಅಧ್ಯಕ್ಷತೆ ವಹಿಸಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನದ ಪೌರಾಣಿಕ ಜ್ಞಾನವು ಮಕ್ಕಳಿಗೆ ಬದುಕಿನ ಸಂಸ್ಕಾರವನ್ನು ಕಳಿಸಿಕೊಡುತ್ತದೆ. ಸಾಲಿಗ್ರಾಮ ಮಕ್ಕಳ ಮೇಳ, ಯಕ್ಷ ಶಿಕ್ಷಣ ಟ್ರಸ್ಟ್ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿಕೊಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದಾರೆ ಎಂದರು.
ಮುಖ್ಯ ಅಭ್ಯಾಗತರಾಗಿ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ, ಟ್ರಸ್ಟಿ ಶ್ರೀಕಾಂತ ಉಡುಪ ಉಪಸ್ಥಿತರಿದ್ದರು. ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ಗುರು ದೇವದಾಸ ಕೂಡ್ಲಿಯವರಿಗೆ ಸುವರ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಕಾಡೆಮಿಯ ರಿಜಿಸ್ಟ್ರಾರ್ ನಮೃತ ಎನ್ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕ ರಾಘವ ಎಚ್ ಪ್ರಸ್ಥಾವಿಸಿದರು. ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ವಂದಿಸಿದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕಲಾ ಪೀಠ ಕೋಟ ತಂಡದಿAದ ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ಮೈಂದ ದ್ವಿವಿಧ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

