ಮಂಗಳೂರು: ಅಕ್ರಮ ಪಿಸ್ತೂಲ್‌ನ್ನು ವಶದಲ್ಲಿರಿಸಿಕೊಂಡಿರುವ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆ ಮಂಜೇಶ್ವರ ಕಡಂಬಾರು ಮೊರ್ತಾನ ನಿವಾಸಿ ಮೊಹಮ್ಮದ್ ಅಸ್ಕರ್ (26), ಮಂಜೇಶ್ವರ ಮೂಡಂಬೈಲ್ ಬೆಜ್ಜ ನಿವಾಸಿ ಅಬ್ದುಲ್ ನಿಸಾರ್ ಕೆ. (29) ಬಂಧಿತ ಆರೋಪಿಗಳು.
ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪುಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್‌ನ್ನು ವಶದಲ್ಲಿರಿಸಿಕೊಂಡು ಯಾವುದೋ ದುಷ್ಕೃತ್ಯ ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್-1, ಸಜೀವ ಮದ್ದುಗುಂಡುಗಳು-2, ಮೊಬೈಲ್ಫೋನುಗಳು-2, ಹಾಗೂ ಕಪ್ಪು ಬಣ್ಣದ ಹುಂಡೈ ವರ್ನಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ’ ಒಟ್ಟು ಮೌಲ್ಯ ರೂ. 7,15,000 ಎಂದು ಅಂದಾಜಿಸಲಾಗಿದೆ
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್ ಅಸ್ಟರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಅಪಹರಣ, ಹಲ್ಲೆ ಪ್ರಕರಣ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟದ ಪ್ರಕರಣ ಹೀಗೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ., ಪಿಎಸ್‌ಐ ಸುದೀಪ್ ಎಂ.ವಿ. ಮತ್ತು ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು