Home » ಬೀದಿ ನಾಯಿಗೆ ವಿಷ  : ಸುಳಿವು ನೀಡಿದವರಿಗೆ 50 ಸಾವಿರ ಬಹುಮಾನ 
 

ಬೀದಿ ನಾಯಿಗೆ ವಿಷ  : ಸುಳಿವು ನೀಡಿದವರಿಗೆ 50 ಸಾವಿರ ಬಹುಮಾನ 

by Kundapur Xpress
Spread the love

ಕಾರ್ಕಳ : ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆ ಪ್ರದೇಶದಲ್ಲಿ ನಾಯಿಗೆ ವಿಷ ಹಾಕಿ ಕೊಂದ ಘಟನೆ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ, ಈ ಬಗ್ಗೆ ಪ್ರಾಣಿ ಹಕ್ಕು ಹೋರಾಟ ಸಂಸ್ಥೆ ಪೆಟಾ’ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಬಗ್ಗೆ ಸುಳಿವು ನೀಡುವವರಿಗೆ 50 ಸಾವಿರ ರು. ಬಹುಮಾನ ಘೋಷಿಸಿದೆ.

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ವ್ಯಕ್ತಿಯೊಬ್ಬರು ಬೀದಿ ನಾಯಿಗಳಿಗೆ ಆಹಾರ ನೀಡಿ ಸಲಹುತ್ತಿದ್ದರು. ಕಳೆದ ಜೂ.5ರಂದು ಈ ಪೈಕಿ ಬೀದಿನಾಯಿಯೊಂದರ ಮೃತದೇಹ ಪತ್ತೆಯಾಗಿ, ತಕ್ಷಣವೇ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯ ವರದಿ ಆಧಾರಿತವಾಗಿ ನಾಯಿಗೆ ವಿಷ ಉಣಿಸಲಾಗಿದೆ ಎಂಬುದು ದೃಢಪಟ್ಟಿದೆ. ಈ ಬಗ್ಗೆ ಅಜೆಕಾರು ಠಾಣೆಗೆ ನಾಯಿಗೆ ಆಹಾರ ಹಾಕುವವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪೆಟಾ ಸಂಸ್ಥೆ ಈ ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಪೊಲೀಸರು ಈ ಬಗ್ಗೆ ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದೆ. ಇದೇ ಸಂದರ್ಭದಲ್ಲಿ ಆರೋಪಿಗಳ ಪತ್ತೆಗೆ ಸಹಾಯ ಮಾಡುವ ಮಾಹಿತಿಯನ್ನು ನೀಡುವ ವ್ಯಕ್ತಿಗೆ 50 ಸಾವಿರ ರು. ನಗದು ಬಹುಮಾನ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿ ನೀಡುವವರ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿ ಇರಿಸಲಾಗುವುದು ಎಂದು ಪೆಟಾ ಖಚಿತಪಡಿಸಿದೆ. ತಕ್ಷಣ ವರದಿ ನೀಡುವಂತೆ ಹಾಗೂ ಯಾವುದೇ ಶಂಕಾಸ್ಪದ ಚಟುವಟಿಕೆಗಳು ಕಂಡು ಬಂದರೆ ಅಜೆಕಾರು ಪೊಲೀಸ್‌ ಠಾಣೆಗೆ ಸಂಪರ್ಕಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

 

Related Articles

error: Content is protected !!