ಬಂಟ್ವಾಳ : ಇಡಿ ಅಧಿಕಾರಿಗಳೆಂದು ನಂಬಿಸಿ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶದ ಬೀಡಿ ಉದ್ಯಮಿಯೋರ್ವರ ಮನೆಗೆ ದಾಳಿ ನಡೆಸಿದ ತಂಡವೊಂದು ಬರೋಬ್ಬರಿ 30 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ಇ.ಡಿ.ಅಧಿಕಾರಿಗಳ ಹೆಸರಿನಲ್ಲಿ ದಾಳಿ ನಡೆಸಿದಂತೆ ನಟಿಸಿದೆ.
ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದ ನಾಟಕ ಮಾಡಿ ಮನೆಯಲ್ಲಿ ಸಿಕ್ಕಿದ ಸುಮಾರು 30 ಲಕ್ಷ ದೋಚಿ ಪರಾರಿಯಾಗಿದ್ದಾರೆ.
ಹಿಂದಿ, ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಮಾತನಾಡುವ ಆರು ಮಂದಿಯ ತಂಡ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಮನೆ ಮಾಲಿಕ ಸುಲೈಮಾನ್ ಅವರು ಬಾಗಿಲು ತೆರೆಯುತ್ತಿದ್ದಂತೆ ಐಡಿ ಕಾರ್ಡ್ ತೋರಿಸುತ್ತಾ ನಾವು ಇ.ಡಿ.ಅಧಿಕಾರಿಗಳೆಂದು ಪರಿಚಯಿಸಿದ್ದಾರೆ.
ಅಧಿಕಾರಿಗಳೆಂಬ ವಿಶ್ವಾಸದಲ್ಲಿ ಅವರು ಒಳಗಡೆ ಕರೆದು ಮಾತನಾಡಿದ್ದಾರೆ. ಆ ಸಮಯ ತಂಡದ ಓರ್ವ ಕನ್ನಡದಲ್ಲಿ ಮಾತನಾಡುತ್ತಾ ಬೀಡಿ ಉದ್ಯಮ ಮತ್ತು ವ್ಯವಹಾರದ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾನೆನ್ನಲಾಗಿದೆ.
ಆಗ ಸುಲೈಮಾನ್ ಅವರು “ನನ್ನ ಲೆಕ್ಕ ಪರಿಶೋಧಕರು ಇದ್ದಾರೆ. ನಾಳೆ ಮಾತನಾಡುವ” ಎಂದು ಹೇಳಿದ್ದಾರೆ. ಅದೆಲ್ಲ ಬೇಡ, ಹಣ ಮತ್ತು ಚಿನ್ನಾಭರಣ ಎಷ್ಟಿದೆ ಎಂದು ತೋರಿಸಿ ಎನ್ನುತ್ತಾ ಮನೆಯವರ ಮೊಬೈಲ್ ಪಡೆದುಕೊಂಡಿದ್ದಲ್ಲದೆ ಮುಂದಿನ ಮತ್ತು ಹಿಂದಿನ ಬಾಗಿಲು ಮುಚ್ಚಿದ ತಂಡ ಮನೆಯವರನ್ನೆಲ್ಲಾ ಒಂದು ಕಡೆ ಕುಳ್ಳಿರಿಸಿ ಸಂಪೂರ್ಣ ತಪಾಸಣೆ ನಡೆಸಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ತಪಾಸಣೆ ನಾಟಕ ಮಾಡಿದ ದರೋಡೆಕೋರರು ಹಣ ಮತ್ತು ಚಿನ್ನಾಭರಣಗಳನ್ನು ಗಂಟುಮೂಟೆ ಕಟ್ಟಿದರು.
ತಪಾಸಣೆಯ ನಾಟಕ ಮುಗಿಸಿದ ಬಳಿಕ ಹಣವನ್ನು ಗೋಣಿಗೆ ತುಂಬಿಸಿದ ನಕಲಿ ಅಧಿಕಾರಿಗಳ ತಂಡ ಚಿನ್ನಾಭರಣಗಳನ್ನು ಅಲ್ಲೇ ಬಿಟ್ಟು ಮೂರು ಮೊಬೈಲುಗಳನ್ನು ಪಡೆದು ಎರ್ಟಿಗಾ ಕಾರಿನಲ್ಲಿ ಪರಾರಿಯಾಗಿದ್ದಾರೆ
ಅಷ್ಟರಲ್ಲಿ ಇ.ಡಿ.ಮುಖವಾಡ ತೊಟ್ಟ ನಟೋರಿಯಸ್ ದರೋಡೆಕೋರರು ಮಾತ್ರ ತಮ್ಮ ಅಡ್ಡೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ಜಿಲ್ಲಾ ಎಸ್ಪಿ ಬಂಟ್ವಾಳ ಡಿವೈಎಸ್ಪಿಯವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಗೊಂಡಿದೆ. ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿದೆ.