ಉಡುಪಿ : ಮನೆಗಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯಕಳ್ಳರನ್ನು ಪಡುಬಿದ್ರಿ ಪೊಲಿಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರಿನ ಕೊಯ್ದದ ಇಬ್ರಾಹಿಂ ಕಲಂದರ್ ಮತ್ತು ಕಾಸರಗೋಡಿನ ಉರ್ಮಿಚಾಲ್ ನಿವಾಸಿ ಮಹಮ್ಮದ್ ರಿಯಾಜ್ ಬಂಧಿತರು.ಬಂಧಿತರಿಂದ ಕಾರು ಮತ್ತು 24000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜೂ.22ರಂದು ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಗಣೇಶ್ ಪ್ರಸಾದ್ ಶೆಟ್ಟಿರವರ ಮನೆಗೆ ನುಗ್ಗಿ 1.20 ಲಕ್ಷ ರೂ. ಮತ್ತು ಚಿನ್ನದ ಸರವನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ದಾಖಲಾದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಾಂವಧ ಅವರ ನೇತೃತ್ವದ ತಂಡ, ಕಳ್ಳತನದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಕಾಸರಗೋಡು ಜಿಲ್ಲೆಯ ಕುಂಬಳೆ ಮೊಗ್ರಾಲ್ ಹಾಗೂ ಪುತ್ತೂರು ಸಾಸ್ತ್ರ ನಗರ ಎಂಬಲ್ಲಿ ವಾಸಮಾಡಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.
ಅಂತಾರಾಜ್ಯ ಕಳ್ಳರು
ಇಬ್ರಾಹಿಂ ಕಲಂದರ್ ಮೇಲೆ ಈಗಾಗಲೇ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ 2 ದೇವಸ್ಥಾನ ಕಳವು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಪ್ರಯತ್ನ, ಮೇಲ್ಪರಂಭ ಠಾಣೆಯಲ್ಲಿ ಮನೆ ಕಳವು ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಮುನಿಯಲು ಸೊಸೈಟಿ ದರೋಡೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣ, ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ 4 ಮನೆ ಕಳವು ಪ್ರಕರಣ, ಕಡಬ ಪೊಲೀಸ್ ಠಾಣೆಯಲ್ಲಿ ಸರ ಕಳ್ಳತನ, ಉಪ್ಪಿನಂಗಡಿ ಠಾಣೆಯಲ್ಲಿ ಅಂಗಡಿ ಕಳವು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಂಗಡಿ ಕಳವು, ಮಡಿಕೇರಿ ಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿದೆ. ಈತ ಇತ್ತೀಚಿಗೆ ಕೇರಳದ ಹೊಸದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಹೊಂದಿದ್ದ.
ಮೊಹಮ್ಮದ್ ರಿಯಾಜ್ ಮೇಲೆ ಕಾಸರಗೋಡು ಜಿಲ್ಲೆಯ ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಪುತ್ತೂರು ನಗರ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿತ್ತು. ಈತ ‘ಕೂಡ ಇತ್ತೀಚಿಗೆ ಕಾಸರಗೋಡು ಸಬ್ ಜೈಲಿನಿಂದ ಬಿಡುಗಡೆ ಹೊಂದಿದ್ದ ಎಂದು ತಿಳಿದುಬಂದಿದೆ

