ಮಂಗಳೂರು : ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ 5 ಮಂದಿಯನ್ನು ದಸ್ತಗಿರಿ ಮಾಡಿ 70 ಗ್ರಾಂ ಎಂಡಿಎಂಎಯನ್ನು ಮಂಗಳೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಮೂಲದ, ಪ್ರಸ್ತುತ ಶಿವಮೊಗ್ಗ ಟಿಪ್ಪುನಗರ ನಿವಾಸಿ ಅಬ್ದುಲ್ ಶಾಕೀರ್ (24), ಮಂಜೇಶ್ವರ ಕುಂಜತ್ತೂರಿನ ಹಸನ್ ಆಶೀರ್(34), ಕಣ್ಣೂರು ಪೆಂಗಾವ್ನ ರಿಯಾಜ್ ಎ.ಕೆ. (31), ಕಾಸರಗೋಡು ವರ್ಕಾಡಿಯ ಮೊಹಮ್ಮದ್ ನೌಷಾದ್ (22), ಮಂಜೇಶ್ವರ ಕುಂಜತ್ತೂರಿನ ಯಾಸೀನ್ ಇಮ್ರಾಜ್ ಅಲಿಯಾಸ್ ಇಂಬು (35) ಬಂಧಿತರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತು ಎಂಡಿಎಂಎಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ನೆತ್ತಿಲಪದವು ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳಿಂದ 3,50,000 ರು. ಮೌಲ್ಯದ 70 ಗ್ರಾಂ ಎಂಡಿಎಂಎ, 5 ಮೊಬೈಲ್ ಫೋನ್,1460 ರು.ನಗದು,ಡಿಜಿಟಲ್ ತೂಕಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸೊತ್ತಿನ ಒಟ್ಟು ಮೌಲ್ಯ 4,25,500 ರು. ಎಂದು ಅಂದಾಜಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.