ಮಂಗಳೂರು : ನೈಜೀರಿಯಾದ ಪ್ರಜೆಯೊಬ್ಬನನ್ನು ಬಂಧಿಸಿರುವ ಮಂಗಳೂರು ನಗರ ಸಿಸಿಬಿ ಪೊಲೀಸರು ಆತನಿಂದ ಬರೋಬ್ಬರಿ 6 ಕೋಟಿ ಮೊತ್ತದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಕರಾವಳಿಯ ಇತಿಹಾಸದಲ್ಲಿಯೇ ದೊಡ್ಡ ಮಟ್ಟದ ಡ್ರಗ್ಸ್ ದಂಧೆಯೊಂದನ್ನು ಬಯಲಿಗೆಳೆದಂತಾಗಿದೆ.
ನೈಜೀರಿಯಾದ ಪೀಟರ್ ಅಕೆಡಿ ಬೆಲೆನ್ನೋ (38) ಬಂಧಿತ. ಈತನಿಂದ 6.310 ಕೆಜಿ ಎಂಡಿಎಂಎ, 3 ಮೊಬೈಲ್, ಡಿಜಿಟಲ್ ತೂಕ ಮಾಪಕ, 35 ಎಟಿಎಂ ಹಾಗೂ ಡೆಬಿಟ್ ಕಾರ್ಡ್‌ಗಳು, 17 ಇನ್ ಆ್ಯಕ್ಟಿವ್ ಸಿಮ್ ಕಾರ್ಡ್ ಗಳು, 10 ವಿವಿಧ ಬ್ಯಾಂಕ್ ಗಳ ಪಾಸ್ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೀಸಾ ಅವಧಿ ಮುಗಿದರೂ ವಾಸ :
ರಾಜ್ಯದ ವಿವಿಧೆಡೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪೀಟರ್‌ತನ್ನ ವಾಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿ ವಾಸವಿದ್ದ. ಮಂಗಳೂರಿನಲ್ಲಿ ಡ್ರಗ್ಸ್ ಪ್ರಕರಣವೊಂದರಲ್ಲಿ ಹೈದರ್ ಆಲಿ ಎಂಬಾತನನ್ನು ಬಂಧಿಸಿದಾಗ ನೈಜೀರಿಯಾದ ಪ್ರಜೆಯ ಲಿಂಕ್ ಪೊಲೀಸರಿಗೆ ದೊರಕಿದ್ದು, ಬಳಿಕ ಕಾರ್ಯಾಚರಣೆ ಮೂಲಕ ಪೀಟರ್‌ನನ್ನು ಬಂಧಿಸಲಾಗಿದ್ದು, ಇನ್ನಷ್ಟು ಮಂದಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪೀಟರ್ ಅಕೆಡಿ ಬೆಲೆನೊ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ದೊಡ್ಡಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ಸಾಯಿಮಿಡೋ ಪೇಸ್-2ನ ಗೋವಿಂದ ರೆಡ್ಡಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತವಾಗಿ ವಾಸವಿದ್ದ ಡ್ರಗ್ಸ್ ಸಂಗ್ರಹಕ್ಕೆಂದೇ ಪ್ರತ್ಯೇಕ ಕೊಠಡಿಯನ್ನು ಗೊತ್ತುಪಡಿಸಿದ್ದ ಮಂಗಳೂರಿನಲ್ಲಿ ಬಂಧಿತ ಹೈದರ್ ಅಲಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ ಡ್ರಗ್ಸ್ ಪೆಡ್ಡರ್ ಗಳ ಮಾಹಿತಿ ಸಂಗ್ರಹಿಸಿ, ತಾಂತ್ರಿಕ ಸಹಾಯಗಳ ಮೂಲಕ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ನೈಜಿರೀಯಾ ಪ್ರಜೆಯನ್ನು ಪತ್ತೆಹಚ್ಚಿದ್ದಾರೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಂ ಸುಂದರ್ ಎಚ್. ಎಂ. ಪಿಎಸ್ಐಗಳಾದ ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ನರೇಂದ್ರ, ವಿಎಸ್‌ಐಗಳಾದ ಮೋಹನ್ ಕೆ.ವಿ. ರಾಮ ಪೂಜಾರಿ, ಶೀನಪ್ಪ ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಹಿರಿಯ ಪೊಲೀಸರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸಿಪಿ ಮನೋಜ್ ಕುಮಾರ್, ಇನ್ ಸ್ಪೆಕ್ಟರ್ ಶ್ಯಾಂ ಸುಂದರ್ ಉಪಸ್ಥಿತರಿದ್ದರು.