ಬೆಳಗಾವಿ : ಕುಡಿಯಲು ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯನ್ನು ಪತ್ನಿಯೇ ಉಸಿರುಗಟ್ಟಿ ಹತ್ಯೆ ಮಾಡಿ, ಬಳಿಕ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹಲ್ಲೆ ನಡೆಸಿ, ಶವವನ್ನು ಎರಡು ತುಂಡು ಮಾಡಿ ಹೊಲದಲ್ಲಿ ಎಸೆದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ (50) ಹತ್ಯೆಯಾದ ವ್ಯಕ್ತಿ. ಈತನ ಪತ್ನಿ ಸಾವಿತ್ರಿ ಇಟ್ನಾಳೆ (30) ಕೊಲೆ ಆರೋಪಿ. ಶ್ರೀಮಂತ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಡಿ.8ರಂದು ಕುಡಿಯಲು ಹಣ ನೀಡುವಂತೆ ಪೀಡಿಸಿದ್ದಾನೆ. ಇದರಿಂದ ಬೇಸತ್ತ ಸಾವಿತ್ರಿ ಮನೆ ಹೊರಗೆ ಕುಡಿದು ಮಲಗಿದ್ದ ಪತಿಯನ್ನು ಒಳಗೆ ಕರೆದುಕೊಂಡು ಹೋಗಿ, ಕತ್ತು ಹಿಸುಕಿ ಕೊಂದ್ದಿದ್ದಾಳೆ. ನಂತರ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಮೀನು ಕೊಯ್ಯಲು ಬಳಸುವ ಕತ್ತಿಯಿಂದ ದೇಹವನ್ನು 2 ತುಂಡು ಮಾಡಿದ್ದಾಳೆ. ತುಂಡಾದ ದೇಹಗಳನ್ನು ಚಿಕ್ಕ ಬ್ಯಾರೆಲ್‌ನಲ್ಲಿ ಹಾಕಿ ಮನೆಯಿಂದ 200 ಮೀ. ದೂರದಲ್ಲಿರುವ ಗದ್ದೆಗೆ ಎಸೆದಿದ್ದಾಳೆ.