ಕುಂದಾಪುರ : ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ನೀಡಿದೆ. ಕುಂದಾಪುರದ ನಿವಾಸಿ ಮಿಥುನ್(21ವರ್ಷ) ಶಿಕ್ಷೆಗೆ ಗುರಿಯಾದಆರೋಪಿ.
ಈತ 17ವರ್ಷ ಪ್ರಾಯದ ನೊಂದ ಬಾಲಕಿಯನ್ನು ಕಾಲೇಜಿಗೆ ತೆರಳುವ ವೇಳೆ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, ಪುಸಲಾಯಿಸಿದ್ದು, 2023ರ ಜನವರಿಯಿಂದ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದನು. ನಂತರ ಬಾಲಕಿಯ ಆರೋಗ್ಯದಲ್ಲಿ ಆದ ವ್ಯತ್ಯಾಸವನ್ನು ಗಮನಿಸಿದ ಪೋಷಕರು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆ ಗರ್ಭಿಣಿ ಎಂಬುದು ತಿಳಿದು ಪ್ರಕರಣ ಬೆಳಕಿಗೆ ಬಂತು.
ಬಾಲಕಿಯ ತಂದೆ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಬಗ್ಗೆ ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕ ನಂದ ಕುಮಾರ್, ಆರೋಪಿ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ವಾದ ಹಾಗೂ ಪ್ರತಿವಾದಗಳನ್ನು ಮತ್ತು ಡಿಎನ್‌ಎ ಸಾಕ್ಷಿಯನ್ನು ಪರಿಗಣಿಸಿ, ಆರೋಪಿಗೆ ಒಟ್ಟು 20 ವರ್ಷಗಳ ಜೈಲು ಶಿಕ್ಷೆ ಮತ್ತು 21 ಸಾವಿರ ರೂ. ದಂಡ ವಿಧಿಸಿದರು. ದಂಡದ ಮೊತ್ತದಲ್ಲಿ 15 ಸಾವಿರ ರೂ. ಬಾಲಕಿಗೆ, 6 ಸಾವಿರ ರೂ. ಸರಕಾರಕ್ಕೆ ನೀಡುವಂತೆ ಮತ್ತು ನೊಂದ ಬಾಲಕಿಗೆ ಸರಕಾರದಿಂದ 2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.