ಇಬ್ಬರು ವ್ಯಕ್ತಿಗಳಿಗೆ ಜೈಲು
ಉಡುಪಿ: ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ, ಡಿಕ್ಕಿ ಹೊಡೆದ ಪ್ರಕರಣ ಹಾಗೂ ಬೈಕ್‍ಗೆ ವಾಯು ಮಾಲಿನ್ಯ ಪತ್ರ ಹೊಂದಿಲ್ಲದ ಪ್ರಕರಣಕ್ಕೆ ಸಂಬಂಧಿಸಿ ನಗರದ ಪ್ರಧಾನ ಸಿ. ಜೆ. ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯವು ಇಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2020 ಅಕ್ಟೋಬರ್ 3 ರಂದು ರಾತ್ರಿ 1ನೇ ಆರೋಪಿ ಪ್ರಶಾಂತ್ ಎಂಬಾತನು 2ನೇ ಆರೋಪಿ ಶರತ್‍ಗೆ ಸೇರಿದ ಮೋಟಾರ್ ಸೈಕಲ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ತೂರು ಗ್ರಾಮದ ಸಂತೆಕಟ್ಟೆಯ ಗಣೇಶ್ ಕಲ್ಯಾಣ ಮಂಟಪದ ಸಮೀಪ ಬರುತ್ತಿದ್ದ ಮೋಟಾರ್ ಸೈಕಲ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‍ನಲ್ಲಿದ್ದ ಹರೀಶ್ ನಾಯ್ಕ್ ಹಾಗೂ ಕೃಷ್ಣಪ್ಪ ವಾಲ್ಮೀಕಿ ಎಂಬವರಿಗೆ ತೀವ್ರ ಸ್ವರೂಪದಲ್ಲಿ ಗಾಯಗಳಾಗಿದ್ದವು. ಈ ಮೋಟಾರ್ ಸೈಕಲ್‍ಗೆ ವಾಯು ಮಾಲಿನ್ಯ ಪತ್ರ ಇಲ್ಲದಿರುವುದು ಮತ್ತು ವಾಹನ ಚಾಲನಾ ಪರವಾನಿಗೆ ಹೊಂದದೇ ಇರುವ ವ್ಯಕ್ತಿಗೆ ಮೋಟಾರ್ ಸೈಕಲ್ ಅನ್ನು ಚಲಾಯಿಸಲು ನೀಡಿರುವ ಹಿನ್ನಲೆಯಲ್ಲಿ, ಹೆಬ್ರಿ ಠಾಣೆಯ ಪೊಲೀಸ್ ಉಪನಿರಿಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯ ನಡೆದು ಆರೋಪ ಸಾಬೀತದ ಹಿನ್ನೆಲೆ, ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ದೀಪಾ ಅವರು, ಆರೋಪಿ ಪ್ರಶಾಂತ್‍ಗೆ 4 ತಿಂಗಳು ಸಾದಾ ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿದ್ದಾರೆ. 2ನೇ ಆರೋಪಿ ಶರತ್‍ಗೆ 7000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದಾರೆ.