ಸಿದ್ದಾಪುರ : ಕುಂದಾಪುರ ತಾಲೂಕಿನ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರ ಸಂಘದ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಸಂಘದ ಸಹೋದ್ಯೋಗಿಗಳಾದ ಮಹೇಶ್, ಮಂಜುನಾಥ್ ಮತ್ತು ಉದಯಕುಮಾರ್ ರವರು ನೀಡಿದ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆಗೆ ನೀಡಿದ್ದ ಪ್ರಚೋದನೆಯಿಂದ ಅವರು ಕೃತ್ಯ ಎಸಗಿದ್ದಾರೆ ಎಂದು ಆಶಾರವರ ಪತಿ ವಿಜಯ ಎಂಬವರು ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತ್ನಿ ಆಶಾ (50ವರ್ಷ) ಸಿದ್ದಾಪುರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಬೆಳಗ್ಗೆ ಸ್ಕೂಟರ್ ನಲ್ಲಿ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದರು. ಇತ್ತೀಚೆಗಿನ ದಿನಗಳಲ್ಲಿ ಯಾರೊಂದಿಗೊ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಬ್ಯಾಂಕಿನ ಸಿಬ್ಬಂದಿ ಹಲವು ದಿನಗಳಿಂದ ನೀನು ಸಂಘದ ಹಣವನ್ನು ವಂಚನೆ ಮಾಡಿದ್ವಿ. ಅದನ್ನು ವಾಪಾಸು ಕೊಡು, ಇಲ್ಲದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾಯಿ ಎಂದು ಕಿರುಕುಳ ನೀಡುತ್ತಿದ್ದರು ಎಂಬದಾಗಿ ಹೇಳಿಕೊಂಡಿದ್ದರು ಎಂದು ವಿವರಿಸಲಾಗಿದೆ. ದೂರಿನಲ್ಲಿ ಮಾ.20ರಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದು, 11.30 ಗಂಟೆಗೆ ಕಚೇರಿಯಿಂದ ವಾಪಾಸು ಮನೆಗೆ ಬಂದಿದ್ದರು. 11.50 ಗಂಟೆ ಸುಮಾರಿಗೆ ಕಾರಿನಲ್ಲಿ ಸಂಘದ ಸಿಬ್ಬಂದಿ ಮಹೇಶ್, ಮಂಜುನಾಥ್, ಉದಯಕುಮಾರ್ ಮನೆಗೆ ಆಗಮಿಸಿ ಆಶಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಬೇಸತ್ತ ಅವರು ಮನೆಯ ಮೇಲ್ಟಾವಣಿ ಕೋಣೆಗೆ ಹೋಗಿ ಬಾಗಿಲನ್ನು ಭದ್ರಪಡಿಸಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ