ಕುಂದಾಪುರ : ಮನೆಯ ಬಾಗಿಲಿನ ಬೀಗ ಒಡೆದು ಮೊಬೈಲ್, ನಗದು ಕಳವು ಮಾಡಿದ ಕಾನೂನು ಸಂಘರ್ಷಕ್ಕೆ ಒಳಗಾಗದ ಬಾಲಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಅಂಪಾರು ಗ್ರಾಮದ ಅಕ್ಕಯ್ಯ ಎಂಬವರು ತನ್ನ ಮಗಳೊಂದಿಗೆ ದಸರಾ ರಜೆ ಪ್ರಯುಕ್ತ ಅ. 10 ರಿಂದ 21ರವರೆಗೆ ತಾಯಿ ಮನೆಗೆ ತೆರಳಿದ್ದು, ವಾಪಾಸು ಅಂಪಾರು ಮನೆಗೆ ಬಂದು ನೋಡುವಾಗ ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗ ಒಡೆದು, ಕೋಣೆಯಲ್ಲಿ 5 ಡಬ್ಬದಲ್ಲಿದ್ದ 2500 ರೂ. ದೇವರ ಕಾಣಿಕೆ, ಟಿವಿ ಸ್ಟ್ಯಾಂಡ್ ಮೇಲೆ ಇದ್ದ ಸುಮಾರು 8 ಸಾವಿರ ರೂ. ಮೌಲ್ಯದ 2 ಮೊಬೈಲ್ ಹಾಗೂ 1 ಮೊಬೈಲ್ ಚಾರ್ಜರ್ ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಠಾಣಾ ಪಿ.ಎಸ್.ಐ. ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಯವರು ಈ ಕಳ್ಳತನ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆತನಿಂದ ಎರಡು ಮೊಬೈಲ್ * ಫೋನ್, ನಗದು 2500 ರೂ ಸುಮಾರು 1700 ರೂ. ಮೌಲ್ಯದ ಮಗುವಿನ ಸಣ್ಣ ಕಿವಿ ಓಲೆ, 11 ಸಾವಿರ ರೂ. ಮೌಲ್ಯದ ಉಂಗುರ, ಬೆಳ್ಳಿಯಂತೆ ತೋರುವ ಸುಮಾರು 3500 ರೂ. ಮೌಲ್ಯದ ದಪ್ಪ ಸರ, ಸಪೂರ ಸರ, ಉಂಗುರ ಮತ್ತು 5 ಕಾಲು ಉಂಗುರ ವಶಪಡಿಸಿಕೊಂಡಿದ್ದು ಇದರ ಒಟ್ಟು ಸುಮಾರು 87,890 ಎಂದು ಅಂದಾಜಿಸಲಾಗಿದೆ.
ಪ್ರಕರಣದ ಆರೋಪಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಉಡುಪಿ ಬಾಲ ನ್ಯಾಯ ಮಂಡಳಿಯವರಲ್ಲಿ ಹಾಜರುಪಡಿಸಲಾಗಿದೆ.