ಕುಂದಾಪುರ : ಶಿಕ್ಷಕರ ಉದ್ಧೇಶ ಜ್ಞಾನ ಕೊಡುವುದೇ ಹೊರತು ಉದ್ಯೋಗ ನೀಡುವುದಲ್ಲ. ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ನಿರಂತರ ಪ್ರಯತ್ನದ ಮುಖೇನ ಬದುಕು ರೂಪಿಸಿಕೊಳ್ಳುವಂತಾಗಬೇಕು. ವಿದ್ಯೆಯೊಂದಿಗಿನ ಸಂಸ್ಕಾರದ ಬದುಕು ಶಿಷ್ಯಂದಿರದ್ದಾದರೆ ಅದು ಗುರುವಿಗೆ ನೀಡುವ ಬಹುದೊಡ್ಡ ಸತ್ಕಾರ ಎಂದು ಬೈಂದೂರು ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಶ್ರೀ ಉದಯ್ ಕುಮಾರ್ ಎಮ್.ಪಿ. ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನುದ್ಧೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ಶಿಕ್ಷಣ ಕೇವಲ ಅಭ್ಯಾಸವಾಗದೆ ವಿದ್ಯಾರ್ಥಿಗಳ ಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುವಂತಾಗಬೇಕು ಎಂದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ಪ್ರೀತಿ ಹೆಗ್ಡೆ ವಂದಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ ಪ್ರಾರ್ಥಿಸಿದರು. ಪೂಜಾ ಆಚಾರ್ ಅಭಿನಂದನ ಗೀತೆ ಹಾಡಿದರು. ಚೇತನ್, ಲಕ್ಷ್ಮೀಕಾಂತ್ ಅನಿಸಿಕೆ ಹಂಚಿಕೊಂಡರು.