ಕುಂದಾಪುರ : ಹೆತ್ತವರು ಮತ್ತು ಪೋಷಕರು ಇಂದಿನ ಧಾವಂತದ ಬದುಕಿನಲ್ಲಿ ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನಕೊಡಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವು ಮಹತ್ವದ್ದು. ಮಕ್ಕಳ ಜೊತೆ ಭಾವನಾತ್ಮಕ ಸಂಬAಧವನ್ನು ಇಟ್ಟುಕೊಂಡು, ನಿರಂತರ ಅವರ ಒಡನಾಟದಲ್ಲಿದ್ದಾಗ ಮಕ್ಕಳ ಯಶಸ್ಸು ಸಾಧ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ. ಕೆ. ಉಮೇಶ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಕ್ಷಕ-ಶಿಕ್ಷಕರ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ಇದೇ ಸಂದರ್ಭ ಅವರು ಪೋಷಕರು ಮಕ್ಕಳಿಗೆ ಮೊಬೈಲ್ ಬಳಕೆ, ಮಾದಕ ವ್ಯಸನಗಳು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವ ಬಗ್ಗೆ ಜಾಗೃತ ಪ್ರಜ್ಞೆಯನ್ನು ಮೂಡಿಸಬೇಕು ಎಂದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಜಯಕರ ಹೆಗ್ಡೆ ಉಪಸ್ಥಿತರಿದ್ದರು. ರಕ್ಷಕ-ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರವಾಡಿಯ ಶಿಕ್ಷಕಿ ಶ್ರೀಮತಿ ಶೋಭಾ ಪೂಜಾರಿ ಅವರು ಮಾತನಾಡಿ, ಮನೆ, ಶಿಕ್ಷಣ ಸಂಸ್ಥೆ ಹಾಗೂ ಸಮಾಜ ಈ ಮೂರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮ ಸಂಯೋಜಕ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನಾಡಿ, ಸ್ವಾಗತಿಸಿದರು.
ಆಡಳಿತ ನಿಕಾಯಕ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಕಾಲೇಜಿನ ಶೈಕ್ಷಣಿಕ ವಾತಾವರಣ ಕುರಿತು ಮಾಹಿತಿ ನೀಡಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಪ್ರಣಮ್ ಆರ್. ಕಾರ್ಯಕ್ರಮ ನಿರೂಪಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಯೋಗೀಶ್ ಶಾನುಭೋಗ್ ವಂದಿಸಿದರು. ವಿದ್ಯಾರ್ಥಿ ಶ್ರೀಶಾಂತ್ ಪ್ರಾರ್ಥಿಸಿದರು.

