ಕುಂದಾಪುರ : ಒಬ್ಬ ವ್ಯಕ್ತಿ ಹುಟ್ಟಿನಿಂದ ಅಥವಾ ಕಾರಣಾಂತರಗಳಿಂದ ಅಂಧತ್ವಕ್ಕೆ ತುತ್ತಾಗಬಹುದು.ಅಂತಹ ವ್ಯಕ್ತಿಗಳು ತಮ್ಮ ಇಡೀ ಜೀವಿತಾವಧಿಯಲ್ಲಿ ಅಂಧರಾಗಿಯೇ ಉಳಿಯುವ ಪ್ರಮೇಯ ಹಿಂದೆ ಇತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ವಿಜ್ಞಾನ ಮತ್ತು ತಂತ್ರಜಾನದ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯಿಂದಾಗಿ ದೇಹದ ಅಂಗಾಂಗಗಳನ್ನು ಇನ್ನೊಬ್ಬರಿಗೆ ಕಸಿ ಮಾಡಲು ಸಾಧ್ಯ ಆದರೆ ಇಲ್ಲಿಯ ಬಹುಮುಖ್ಯವಾದ ಸಮಸ್ಯೆ ಎಂದರೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆ ಹಾಗೂ ಮಾಹಿತಿ ಕೊರತೆಯಿಂದಾಗಿ ಅಂಗಾಂಗಗಳ ದಾನಿಗಳಾಗಿ ನೋಂದಣಿಯಾಗುತ್ತಿರುವವರ ಸಂಖ್ಯೆ ತೀರಾ ಕಡಿಮೆ
ಆದುದರಿಂದ ಅಂಗ ವೈಫಲ್ಯದಿಂದ ಬಳಲುತ್ತಿರುವವರು ಗುಣಮುಖರಾಗದೇ ಯಾತನಾಮಯವಾದ ಜೀವನವನ್ನು ಸಾಗಿಸುತ್ತಿದ್ದಾರೆ. ಇವತ್ತು ಸರಿಸುಮಾರು 30 ಲಕ್ಷಕ್ಕೂ ಮೀರಿ ಅಂಧತ್ವದಿಂದ ಜನರು ಬಳಲುತ್ತಿದ್ದಾರೆ.ಆದರೆ ನೇತ್ರದಾನ ಮಾಡುವವರ ಸಂಖ್ಯೆ ಕಲವೇ ಸಾವಿರದಷ್ಟು ಇದೆ.ವಿದ್ಯಾರ್ಥಿಗಳಾದ ನಾವು ಇವತ್ತು ನಮ್ಮ ಮರಣದ ನಂತರ ನಮ್ಮ ನೇತ್ರವನ್ನು ದಾನ ಮಾಡುವ ಸಂಕಲ್ಪವನ್ನು ಕೈಗೊಂಡು ನೋಂದಣಿ ಮಾಡಿಸಿಕೊಂಡು,ಮರಣಾ ನಂತರ ನೇತ್ರದಾನವನ್ನು ಮಾಡುವುದರ ಮೂಲಕ ದೃಷ್ಟಿಹೀನರಿಗೆ ಬೆಳಕಾಗಬೇಕು” ಎಂದು ಡಾ. ಪೂರ್ಣಿಮಾ,ವೈದ್ಯಾಧಿಕಾರಿಗಳು,ಪ್ರಾಥಮಿಕ ಆರೋಗ್ಯ ಕೇಂದ್ರ,ಕೋಟೇಶ್ವರ ಇವರು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಅವರು ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ,ಕೋಟೇಶ್ವರ ಇವರ ಸಹಭಾಗಿತ್ವದಲ್ಲಿ ನಡೆದ ನೇತ್ರದಾನ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ವಹಿಸಿ,ವಿದ್ಯಾರ್ಥಿಗಳು ಈ ಶ್ರೇಷ್ಠ ಆಂದೋಲನದಲ್ಲಿ ಭಾಗವಹಿಸಿ ನೇತ್ರದಾನಕ್ಕೆ ತಮ್ಮನ್ನು ನೋಂದಾಯಿಸಿಕೊಂಡು,ತಮ್ಮ ಸುತ್ತಮುತ್ತಲಿರುವ ಜನರಿಗೂ ಸಮರ್ಪಕವಾದ ಮಾಹಿತಿಯನ್ನು ನೀಡುವುದರ ಜೊತೆಗೆ ನೀವು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ,ರಾಮರಾಯ ಆಚಾರ್ಯ,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು,ನಾಗರಾಜ ಯು, ಸಂಚಾಲಕರು, ಆಂತರಿಕ ಗುಣಮಟ್ಟ ಭರವಸಾ ಕೋಶ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಾದ ಶ್ರೀಮತಿ ಜ್ಯೋತಿ ಹಾಗು ಆಶಾಕಾರ್ಯಕರ್ತೆ ಶ್ರೀಮತಿ ಮಲ್ಲಿಕಾ ಉಪಸ್ಥಿತರಿದ್ಧರು.
ಕಾರ್ಯಕ್ರಮವನ್ನು ದಿವ್ಯಶ್ರೀ ಮತ್ತು ಸಂಗಡಿಗರು, ಅಂತಿಮ ಬಿ ಕಾಂ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.ನಾಗರಾಜ ವೈದ್ಯ ಎಂ. ವಿಭಾಗ ಮುಖ್ಯಸ್ಥರು,ಕನ್ನಡ ವಿಭಾಗ ಸ್ವಾಗತಿಸಿದರು,ವೆಟರನ್ ರವಿಚಂದ್ರ ಹೆಚ್ ಎಸ್, ಗ್ರಂಥಪಾಲಕರು ವಂದಿಸಿದರು.ಸಂತೋಷ ನಾಯ್ಕ ಹೆಚ್, ಕಾರ್ಯಕ್ರಮಾಧಿಕಾರಿಗಳು,ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಿಸಿದರು.