ಕುಂದಾಪುರ: ಮೂರು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುವ ಈ ಭಾಷೆ, ಸಾಂಸ್ಕೃತಿಕ ಅನನ್ಯತೆಯನ್ನು ಅಂತರ್ಗತಗೊಳಿಸಿಕೊAಡು ಬೆಳಗುತ್ತಿದೆ. ಕನ್ನಡ ಸಂವಹನ ಮಾಧ್ಯಮವಾಗಿ ಗುರುತಿಸಿಕೊಂಡಿರುವ ಭಾಷೆ ಮಾತ್ರವಲ್ಲ, ಬದುಕಿನ ಸಂವೇದನೆಗಳನ್ನು ಒಳಗೊಂಡಿರುವ ಅನನ್ಯ ಭಾಷೆ ಎಂದು ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ .ಉಮೇಶ್ ಪುತ್ರನ್ ಹೇಳಿದರು.
ಅವರು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಭಾಷಾ ಸಂಘ ಆಯೋಜಿಸಿದ ಕನ್ನಡ ರಾಜ್ಯೋತ್ಸವ “ಕನ್ನಡ ಡಿಂಡಿಮ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಾ .ಕೆ .ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಭಾಷಾ ಸಂಘದ ಸಂಯೋಜಕಿ ಡಾ. ದೀಪಾ ಉಪಸ್ಥಿತರಿದ್ದರು.
ಇದೇ ಸಂದರ್ಭ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ ಕನ್ನಡ ಗೀತ ಗಾಯನ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಭಾಷಾ ಸಂಘದ ಸಂಯೋಜಕಿ ಪ್ರವೀಣಾ ಎಮ್. ಪೂಜಾರಿ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಜಿ. ರಾವ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ರಶ್ಮಿತಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿ, ಸಂಸ್ಕೃತ ವಿಭಾಗದ ಮುಖ್ಯಸ್ಥೆ ಮೇಘಾ ಎಸ್. ಭಟ್ ವಂದಿಸಿದರು. ಕಾರ್ಯಕ್ರಮದ ನಡುವೆ ವಿದ್ಯಾರ್ಥಿಗಳು ಹಾಡಿದ ಕನ್ನಡ ಗೀತೆಗಳು ಗಮನ ಸೆಳೆದವು.

