- ನಾಮಸ್ಮರಣೆ
ಕೊನೆಗಾಲದಲ್ಲಿ ದೇವರ ನಾಮವನ್ನೇ ಏಕೆ ಸ್ಮರಿಸಬೇಕು? ಹಾಗೆ ಮಾಡದಿದ್ದರೆ ಏನಾಗುತ್ತದೆ? ಜೀವನದ ಉದ್ದಕ್ಕೂ ದೇವರನ್ನು ನೆನೆಯದವರು ಕೊನೆಗಾಲದಲ್ಲಿ ನೆನೆದ ಮಾತ್ರಕ್ಕೆ ದೇವರ ಪದತಲವನ್ನು ಸೇರುತ್ತಾರೆ ಎಂದು ಹೇಳುವುದಕ್ಕೆ ಏನು ಆಧಾರ? ಈ ಬಗೆಯ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜವೇ ಆಗಿದೆ. ಜೀವನದ ಉದ್ದಕ್ಕೂ ದೇವರನ್ನು ನೆನೆಯದವರಿಗೆ ಕೊನೆಗಾಲದಲ್ಲಿ ಮಾತ್ರವೇ ದೇವರನ್ನು ಸ್ಮರಿಸುವುದು ಸುಲಭ ಸಾಧ್ಯವೆಂದು ತಿಳಿಯುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಅಭ್ಯಾಸ ಬಲದಿಂದ ಮಾತ್ರವೇ ಸದ್ಗುಣಗಳನ್ನು ರೂಢಿಸಿಕೊಳ್ಳುವುದು ಸಾಧ್ಯ. ಪ್ರಯತ್ನಶೀಲರಾಗದೇ ಜೀವನದಲ್ಲಿ ರೂಢಿಸಿಕೊಳ್ಳಲು ಸಾಧ್ಯವಾಗುವುದು ದುರ್ಗುಣಗಳನ್ನು ಮಾತ್ರ. ಉತ್ತಮ ಹವ್ಯಾಸಗಳನ್ನು ಮತ್ತು ದುಶ್ಚಟಗಳ ನಡುವಿನ ಅಂತರವೇ ಇದು. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಕಷ್ಟ. ಅದಕ್ಕೆ ನಿರಂತರ ಪ್ರಯತ್ನ ಮತ್ತು ಶ್ರದ್ಧೆ ಬೇಕು. ಹಾಗೆಂದು ಹಾಗೆಂದು ಆ ಒಳ್ಳೆಯ ಹವ್ಯಾಸಗಳನ್ನು ಬಿಟ್ಟುಬಿಡಲು ಕಷ್ಟವೇನೂ ಆಗದು. ಆದರೆ ದುರಭ್ಯಾಸ–ದುಶ್ಚಟಗಳು ಹಾಗಲ್ಲ. ಅವುಗಳನ್ನು ಯಾವ ಪ್ರಯತ್ನವಿಲ್ಲದೆಯೂ ಮೈಗೂಡಿಸಿಕೊಳ್ಳಬಹುದು. ಆದರೆ ಒಮ್ಮೆ ಅಂಟಿಕೊಂಡರೆ ಮತ್ತೆ ಅವುಗಳನ್ನು ಬಿಟ್ಟುಬಿಡುವುದು ಎಷ್ಟು ಮಾತ್ರಕ್ಕೂ ಸುಲಭವಲ್ಲ. ಅದಕ್ಕೆ ನೂರುಪಟ್ಟು ಪ್ರಯತ್ನ ಬೇಕು! ದೇವರ ನಾಮ ಸ್ಮರಣೆ ಮಾಡುವುದಕ್ಕೆ ನಿರಂತರ ಅಭ್ಯಾಸ ಬೇಕು. ಶ್ರದ್ಧೆ ಬೇಕು. ಬದುಕಿನ ಉದ್ದಕ್ಕೂ ಅನೂಚಾನವಾಗಿ ಈ ಅಭ್ಯಾಸ ನಡೆಯದಿದ್ದರೆ ಕೊನೆ ಗಾಲದಲ್ಲಿ ದೇವರ ನಾಮ ಬಾಯಿಯಲ್ಲಿ ಮೂಡಿಬರುವುದಾದರೂ ಹೇಗೆ?