ದುರಹಂಕಾರವೆಂಬ ಶತ್ರು
ನಮ್ಮೊಳಗಿನ ಅಹಂಭಾವವನ್ನೇ ನಾವು ಅನೇಕ ಬಾರಿ ಆತ್ಮವಿಶ್ವಾಸವೆಂದು ತಪ್ಪಾಗಿ ತಿಳಿಯುವುದುಂಟು. ಆದರೆ ಇದು ನಿಜವಾದ ಆತ್ಮವಿಶ್ವಾಸವಲ್ಲ. ಇಂಗ್ಲೀಷಿನಲ್ಲಿ ಅದನ್ನು ಓವರ್ ಕಾನ್ಫಿಡೆನ್ಸ್ ಎನ್ನುವುದುಂಟು. ಅಹಂಭಾವದಿಂದ ಕೂಡಿದ ವಿಶ್ವಾಸದಲ್ಲಿ ನಮ್ಮ ಹೆಚ್ಚುಗಾರಿಕೆ, ಶಕ್ತಿ-ಸಾಮಥ್ರ್ಯ, ಬುದ್ಧಿವಂತಿಕೆಯ ಬಗ್ಗೆ ನಮಗೆ ಅತಿಯಾದ ಅಹಂಕಾರವೇ ತುಂಬಿರುವುದರಿಂದ ಸ್ವಪ್ರತಿಷ್ಠಯೇ ಅದರಲ್ಲಿ ಅಡಗಿರುತ್ತದೆ. ಹಾಗಾಗಿ ಉದ್ದೇಶಿತ ಕಾರ್ಯದಲ್ಲಿ ಸೋಲುಂಟಾದಾಗ ಭಯಂಕರವಾದ ಹತಾಶೆ, ಜುಗುಪ್ಸೆ, ದುಃಖ ಕಾಡುವುದು ಸಹಜ. ಈ ಸೋಲನ್ನು ಎದುರಿಸುವ ಮನೋಬಲವನ್ನೂ ದುರಹಂಕಾರವೆಂಬ ಶತ್ರುವು ನಾಶಮಾಡಿರುತ್ತದೆ. ಕೆಲವೊಂದು ವಿಪರೀತ ಸಂದರ್ಭಗಳಲ್ಲಿ ಮನೋಬಲವನ್ನು ಕಳೆದುಕೊಂಡ ವ್ಯಕ್ತಿ ಕ್ಷಣಮಾತ್ರ ನಿರ್ಧಾರ ಕೈಗೊಂಡು ಆತ್ಮಹತ್ಯೆಗೂ ಮುಂದಾಗುತ್ತಾನೆ. ಇದೆಂತಹ ಘೋರ ದುರಂತ? ಸ್ವಪ್ರತಿಷ್ಠೆಯ ದುರಹಂಕಾರವನ್ನು ಗೆಲ್ಲಲು ಸಾಧ್ಯವಿಲ್ಲವೆ? ಗೀತೆಯಲ್ಲಿ ಕೃಷ್ಣ ಅರ್ಜುನನನ್ನು ಹೀಗೆ ಎಚ್ಚರಿಸುತ್ತಾನೆ. ಸಿದ್ಧಿ-ಅಸಿದ್ಧಿಗಳಲ್ಲಿ ನೀನು ಸಮಾನ ಬುದ್ಧಿಯುಳ್ಳವನಾಗಬೇಕಿದ್ದರೆ ನಿನ್ನ ಯಾವತ್ತೂ ಕರ್ಮಗಳಲ್ಲಿ ನೀನೇ ಕರ್ತೃವೆಂಬ ಭಾವವನ್ನು ಹೊಂದದಿರು. ಸಮತ್ವದ ಭಾವವೆಂಬ ಯೋಗದಲ್ಲಿ ನಿನ್ನನ್ನು ಸ್ಥಿರಗೊಳಿಸಿಯೇ ಕರ್ಮಗಳನ್ನು ಮಾಡು. ಆಗ ಸೋಲು ಗೆಲುವುಗಳು ನಿನ್ನಲ್ಲಿ ಭಾವವಿಕಾರವನ್ನು ಉಂಟು ಮಾಡಲಾರವು. ದುರಂಕಾರವೆಂಬ ಶತ್ರು ನಿನ್ನ ಬಳಿ ಸುಳಿಯದು.