‘ಯಾರಿಗೆ ಹೇಗೆ ಕಾಣಿಸಿಕೊಳ್ಳಬೇಕೋ ಹಾಗೆ ಕಾಣಿಸಿಕೊಳ್ಳುವ ನಾನು ಅವಿನಾಶೀ ಸ್ವರೂಪಿ, ಜನ್ಮ ರಹಿತ. ಸಮಸ್ತ ಜೀವ ಸಂಕುಲಕ್ಕೆ ನಾನೇ ಒಡೆಯನಾದರೂ ನನ್ನ ಪ್ರಕೃತಿಯನ್ನು ಅಧೀನ ಮಾಡಿಕೊಂಡು ನನ್ನ ಯೋಗ ಮಾಯೆಯಿಂದ ನಾನು ಅವತರಿಸುತ್ತೇನೆ. ಧರ್ಮಕ್ಕೆ ಚ್ಯುತಿ ಉಂಟಾದಾಗಲೆಲ್ಲ ಮತ್ತು ಅಧರ್ಮವು ಹೆಚ್ಚಿದಾಗೆಲ್ಲ ನಾನು ನನ್ನ ರೂಪವನ್ನು ರಚಿಸಿಕೊಳ್ಳುತ್ತೇನೆ, ಅರ್ಥಾತ್ ಅವತರಿಸುತ್ತೇನೆ. ಸಾಕಾರ ರೂಪದಿಂದ ಎಲ್ಲರಿಗೂ ಗೋಚರಿಸುತ್ತೇನೆ’ ಎಂದು ಶ್ರೀ ಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ. ಆದುದರಿಂದ ದೇವ ಲೀಲೆಯನ್ನು ನಾವು ನಮ್ಮ ಸಾಮಾನ್ಯ ತಿಳಿವಳಿಕೆಯಿಂದ ಅರ್ಥಮಾಡಿಕೊಳ್ಳಲಾರೆವು. ಇಷ್ಟಿದ್ದರೂ ಗುಡಿಯಲ್ಲಿ ಇರುವ ದೇವರು ಮಾತ್ರವೇ ನಿಜವಾದ ದೇವರು ಎಂಬ ಭಾವನೆ ನಮ್ಮದು. ನಿಜಕ್ಕಾದರೆ ದೇವರು ದೇವಸ್ಥಾನದ ಒಳಗೆ ಮಾತ್ರವೇ ಇರುವವನಲ್ಲ; ಅವನು ಸರ್ವಾಂತರ್ಯಾಮಿ. ಎಲ್ಲ ಕಡೆಯೂ ಕಂಡು ಬರುವನು. ಅವನು ನಿರಾಕಾರ, ನಿರ್ಗುಣನೇ ಆಗಿರುವನು. ಆದರೆ ತನ್ನ ಪರಮ ಭಕ್ತರಿಗಾಗಿ ಮೂರ್ತರೂಪವನ್ನೂ ತಾಳುವನು. ಆದರೆ ದೇವರು ಎಲ್ಲೆಲ್ಲಿಯೂ ಇರುವನು ಎಂಬುದನ್ನು ಭಕ್ತ ಪ್ರಹ್ಲಾದನು ತನ್ನ ತಂದೆ ಹಿರಣ್ಯಕಶಿಪುವಿಗೆ ತೋರಿಸಿ ಕೊಡಲಿಲ್ಲವೇ? ಮಹಾಮಹಿಮನೂ ಸರ್ವಾಂತರ್ಯಾಮಿಯೂ ಆದ ಆ ದೇವನು ಈ ‘ಸ್ತಂಭ’ದೊಳಗೂ ಇರುವವನು ಎಂದು ಪ್ರಹ್ಲಾದ ನುಡಿದಾ ಸಿಟ್ಟಿನ ಪರಾಕಾಷ್ಠೆಯಲ್ಲಿ ಸ್ತಂಭವನ್ನೇ ಪುಡಿಗುಟ್ಟಿದ ಹಿರಣ್ಯಕಶಿಪುವಿಗೆ ಕಂಡದ್ದು ಉಗ್ರ ನರಸಿಂಹ! ಸರ್ವಾಂತರ್ಯಾಮಿಯಾಗಿರುವ ಆ ದೇವರು ಹೃದಯ ದೇಗುಲದಲ್ಲೂ ಇರುವನು, ಮಾತ್ರವಲ್ಲ ಸಮಸ್ತ ಜೀವ ಸಂಕುಲದಲ್ಲೂ ವಿರಾಜಮಾನಾಗಿರು£ವನು. ಅದನ್ನು ತಿಳಿದುಕೊಂಡರೆ ಮಾತ್ರವೇ ನಾವು ವಿಶ್ವಮಾನವರಾಗಿ ಬದುಕಲು ಸಾಧ್ಯ.