ಒಮ್ಮೆ ಒಬ್ಬ ಅರಸನಿಗೆ ಒಂದು ಅಹ್ಲಾದಕರ ಕನಸು ಬಿತ್ತು. ಆ ಕನಸ್ಸಿನಲ್ಲಿ ತಾನು ರಾಜನಾಗಿರದೆ ಒಂದು ಸುಂದರವಾದ ಚಿಟ್ಟೆಯಾಗಿದ್ದು ಹೂವಿಂದ ಹೂವಿಗೆ ಹಾರುತ್ತಾ ಅತ್ಯಾನಂದವನ್ನು ಪಡೆಯುತ್ತಿದ್ದ ಅನುಭವವಾಯಿತು. ಹಾಗೆಯೇ ಸ್ವಲ್ಪ ಹೊತ್ತಿನ ಬಳಿಕ ಕನಸು ಮುಗಿದು ರಾಜನಿಗೆ ಎಚ್ಚರವಾಯಿತು. ಎಂತಹ ಸುಂದರ ಕನಸು! ಎಷ್ಟೊಂದು ಆನಂದದಾಯಕ ಅನುಭವ! ತಾನು ಅರಸನಾಗಿ ಪಡೆಯುತ್ತಿದ್ದ ಆನಂದಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ಆನಂದವನ್ನು ತಾನು ಒಂದು ಕ್ಷಣಕಾಲ ಚಿಟ್ಟೆಯಾಗಿ, ಅದೂ ಕನಸಿನಲ್ಲಿ, ಅನುಭವಿಸಿದೆನಲ್ಲ, ಇದೆಂತಹ ವಿಚಿತ್ರ ಎಂದು ರಾಜನಿಗೆ ಅನ್ನಿಸಿತು. ರಾಜನಾಗಿ ತಾನು ಈ ತನಕ ಪಡೆದ ಆನಂದ ಏನೂ ಅಲ್ಲ; ಕನಸಿನಲ್ಲೊ ಚಿಟ್ಟೆಯಾಗಿ ಕ್ಷಣಕಾಲ ಪಡೆದ ಆನಂದವೇ ಅದ್ಭುತ ಎಂದು ಅವನಿಗೆ ಅನ್ನಿಸಿತು. ಹಾಗಿದ್ದರೆ ರಾಜನ ಜನ್ಮ ಶ್ರೇಷ್ಠವೋ ಚಿಟ್ಟೆಯ ಜನ್ಮ ಶ್ರೇಷ್ಠವೋ ಎಂಬ ಪ್ರಶ್ನೆ ರಾಜನನ್ನು ಕಾಡತೊಡಗಿತು. ಎಷ್ಟು ಚಿಂತಿಸಿದರೂ ಆ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಕೊನೆಗೆ ಆ ರಾಜನು ತನ್ನ ಮಂತ್ರಿಯನನು ಕರೆದು ಅದೇ ಪ್ರಶ್ನೆಯನ್ನು ಕೇಳಿದ. ಸಮಸ್ಯೆ ಏನೆಂದು ಮಂತ್ರಿಗೆ ಹೊಳೆಯಿತು. ‘ಪ್ರಭು, ನಿಜಕ್ಕೂ ರಾಜನ ಜನ್ಮವೇ ಶ್ರೇಷ್ಠ. ಆದರೆ ಕನಸ್ಸಿನಲ್ಲಿ ಚಿಟ್ಟೆಯಾಗಿ ನೀವು ಪಡೆದ ಆನಂದ ಅದ್ಭುತವೆನಿಸಲು ಕಾರಣವಿದೆ. ಅದೆಂದರೆ ಯಃಕಶ್ಚಿತ್ ಚಿಟ್ಟೆಯಾಗಿಯೂ ಅದು ತಾನೇ ರಾಜನೆಂಬ ಭಾವನೆಯಲ್ಲಿ ವಿಹರಿಸಿದ್ದರಿಂದಲೇ ಅದಕ್ಕೆ ಆತ್ಮಾನಂದವನ್ನು ಸವಿಯುವ ಭಾಗ್ಯ ಪ್ರಾಪ್ತವಾಯಿತು. ನಮ್ಮ ಮನಸ್ಸಿನಲ್ಲಿ ಯಾವುದು ಉತ್ಕಟವಾಗಿರುವುದೋ ಅದುವೇ ಜೀವನವಾಗುತ್ತದೆ.’ ಮಂತ್ರಿಯ ಮಾತು ಕೇಳಿ ರಾಜನಿಗೆ ಜ್ಞಾನೋದಯವಾಯಿತು. ಬದುಕಿನ ಸಂತಸ, ಆನಂದ ಇರುವುದು ನಾವೆಷ್ಟು ಸಂಪತ್ತನ್ನು ಗಳಿಸಿದ್ದೇವೆ ಎನ್ನುವುದರ ಮೇಲಲ್ಲ; ನಮ್ಮ ಮನಸ್ಸನ್ನು ನಾವೆಷ್ಟು ಶ್ರೀಮಂತವಾಗಿರಿಸಿದ್ದೇವೆ ಎನ್ನುವುದರ ಮೇಲೆ.